20 ರೂಪಾಯಿಗಾಗಿ ನಾಲ್ಕು ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಲೆ

Man Death 29 Feb 20
Published on

ಚಿಕ್ಕೋಡಿ: ಕೇವಲ 20 ರೂಪಾಯಿಗಾಗಿ 4 ವರ್ಷದ ಬಾಲಕಿಯನ್ನು ಮಹಿಳೆ ಬಾವಿಗೆ ನೂಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಜಾಗನೂರು ಹೊರ ವಲಯದಲ್ಲಿರುವ ತೋಟದಲ್ಲಿ ಜರುಗಿದೆ.

ದಿವ್ಯಾ ವಿನೋದ ಉಗಡೆ (4) ಕೊಲೆಯಾದ ಬಾಲಕಿ. ಹಂತಕಿ ಪೂಜಾ ದತ್ತರಾವ್​ ಕಾಂಬಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ರಾಮಪ್ಪ ಕಳ್ಳೆಪ್ಪಾ ಖಾನಾಪೂರೆ ಎಂಬುವವರ ಸಂಪರ್ಕಕ್ಕೆ ಬಂದ ಮಹಾರಾಷ್ಟ್ರದ ವಾಸಿಮ್​ ಜಿಲ್ಲೆಯ ಕಬ್ಬು ಕಡಿಯುವ ಕೆಲಸಗಾರರ ತಂಡ 7 ತಿಂಗಳ ಹಿಂದೆ ಗ್ರಾಮಕ್ಕೆ ಬಂದು ನೆಲೆಸಿತ್ತು. ರಾಮಪ್ಪ ಅವರ ಟ್ರ್ಯಾಕ್ಟರ್​ನಲ್ಲೇ ಇವರು ಆಗಮಿಸಿದ್ದರು.

ಕಬ್ಬು ಕಟಾವ್​ ಮಾಡಿ ಮತ್ತೆ ಹಿಂದಿರುಗಲು ಸಜ್ಜಾಗಿದ್ದರು. ಅಷ್ಟರಲ್ಲಿ ಕರೊನಾ ವೈರಸ್​ ಹಾವಳಿಯಿಂದ ಲಾಕ್​ಡೌನ್​ ಘೋಷಣೆಯಾದ್ದರಿಂದ ಗ್ರಾಮದಲ್ಲೇ ಉಳಿದಿದ್ದರು.

ದಿವ್ಯಾ ವಿನೋದ ಉಗಡೆಗೆ ಅಂಗಡಿಯಿಂದ ಸಾಮಾನು ತರಲು ಆಕೆಯ ತಾಯಿ 20 ರೂಪಾಯಿ ಕೊಟ್ಟಿದ್ದರು. ಬಾಲಕಿ ಕೈಯಲ್ಲಿ ಹಣ ಹಿಡಿದು ಅಂಗಡಿಗೆ ತೆರಳುತ್ತಿರುವುದನ್ನು ನೋಡಿದ ಪೂಜಾ ದತ್ತರಾವ್​ ಕಾಂಬಳೆ ಬಾಲಕಿಯಿಂದ ಹಣ ಕಿತ್ತುಕೊಂಡು ಆಕೆಯನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಾಳೆ. ಚಿಕ್ಕೋಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net