

ಮುಂಬೈ: ರೂಪಾಯಿ ಬುಧವಾರ ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ 13 ಪೈಸೆ ಏರಿಕೆಯಾಗಿದ್ದು, ಅಮೆರಿಕದ ಡಾಲರ್ ಎದುರು 88.02ಕ್ಕೆ ತಲುಪಿದೆ. ಇದಕ್ಕೆ ದೇಶೀಯ ಷೇರು ಮಾರುಕಟ್ಟೆಯ ಏರಿಕೆ, ಕಚ್ಚಾ ತೈಲದ ಬೆಲೆ ಇಳಿಕೆ ಹಾಗೂ ಅಮೆರಿಕದ ಡಾಲರ್ ಸೂಚ್ಯಂಕದ ದುರ್ಬಲತೆ ಕಾರಣವಾಗಿದೆ.
ವಿದೇಶ ವಿನಿಮಯ ವ್ಯಾಪಾರಿಗಳ ಪ್ರಕಾರ, ಭಾರತ-ಅಮೆರಿಕ ನಡುವಿನ ಸುಂಕ ಭೀತಿ ಹಾಗೂ ವಿದೇಶಿ ಹೂಡಿಕೆಯ ಹೊರಹರಿವುಗಳಿಂದ ರೂಪಾಯಿ ಇನ್ನೂ ಸಾರ್ವಕಾಲಿಕ ಇಳಿಕೆ ಮಟ್ಟದ ಹತ್ತಿರವೇ ಇದೆ. ಇಂಟರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ರೂಪಾಯಿ 88.15ಕ್ಕೆ ಆರಂಭವಾಗಿ, ದಿನದ ವಹಿವಾಟಿನ ಮಧ್ಯೆ ಕನಿಷ್ಠ 88.19 ಹಾಗೂ ಗರಿಷ್ಠ 87.98 ಮಟ್ಟ ತಲುಪಿತು. ಕೊನೆಯಲ್ಲಿ 88.02ಕ್ಕೆ ಮುಗಿದು ಹಿಂದಿನ ಮುಕ್ತಾಯದ ದರಕ್ಕಿಂತ 13 ಪೈಸೆ ಏರಿಕೆಯಾಯಿತು. ಮಂಗಳವಾರ ರೂಪಾಯಿ 5 ಪೈಸೆ ಕುಸಿದು 88.15 ಕ್ಕೆ ಮುಗಿದು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿತ್ತು.