

ಬೆಂಗಳೂರು ಜನ-ಜಾನುವಾರುಗಳಿಗೆ ವಿದ್ಯುತ್ ಅವಘಡಗಳಿಂದ ತಪ್ಪಿಸುವುದು ಸೇರಿ ಪಾದಚಾರಿ ಮಾರ್ಗಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾರ್ಯಕ್ಕೆ ಗುಡ್ ಬೈ ಹೇಳಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿ 500 ಕೆವಿಎ ಸಾಮರ್ಥ್ಯದ ‘ಭೂಗತ ವಿದ್ಯುತ್ ಪರಿವರ್ತಕ’ವನ್ನು ಅಳವಡಿಸಲಾಗಿದೆ.
ಬೆಸ್ಕಾಂ ಮತ್ತು ಬಿಬಿಎಂಪಿ ಸಹಯೋಗದಲ್ಲಿ 1.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಭೂಗತ ವಿದ್ಯುತ್ ಪರಿವರ್ತಕ’ವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಮಂಗಳವಾರ ಚಾಲನೆ ನೀಡಿದರು.
ಬಾಲಾಜಿ ನೇತೃತ್ವದ ತಂಡ ಕೆಲಸ
ಬೆಸ್ಕಾಂನಲ್ಲಿನ ತಾಂತ್ರಿಕ ನಾವಿನ್ಯತಾ ಕೇಂದ್ರದ (ಟಿಐಟಿ) ಉಪ ಪ್ರಧಾನ ವ್ಯವಸ್ಥಾಪಕ ಕೆ. ಬಾಲಾಜಿ ನೇತೃತ್ವದ ತಂಡವು ತಾಂತ್ರಿಕ ಕೆಲಸಗಳನ್ನು ಮಾಡಿದೆ. 1.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಈ ಯೋಜನೆಯ ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ಹಾಗೂ ಬೆಸ್ಕಾಂ 1.33 ಕೋಟಿ ರೂ. ವೆಚ್ಚವಾಗಿದೆ. 14 ಮೀ. ಉದ್ದ, 5 ಮೀ. ಅಗಲ ಮತ್ತು 4 ಮೀ. ಆಳದಲ್ಲಿ ಭೂ ಪರಿವರ್ತಕವನ್ನು ಅಳವಡಿಸಲಾಗಿದೆ. 2020ರ ಮೇ ನಲ್ಲಿ ಕಾಮಗಾರಿ ಆರಂಭಿಸಿ 2023ರ ಮೇ ನಲ್ಲಿ ಪೂರ್ಣಗೊಳಿಸಿದೆ.
ಪರಿವರ್ತಕದ ವಿಶೇಷತೆ ಏನು?
ಸಾಮಾನ್ಯ ಪರಿವರ್ತಕಗಳು ರಸ್ತೆಗಳನ್ನು ನೇತು ಹಾಕಿರಲಾಗುತ್ತದೆ. ಆದರೆ, ಹೊಸ ಪದ್ಧತಿಯಲ್ಲಿ ಪರಿವರ್ತಕ ಮತ್ತು ಆರ್ಎಂಯುಗಳು ಪೂರ್ಣವಾಗಿ ನೆಲದಡಿ ಬರುತ್ತವೆ. ನೇತು ಹಾಕಿರುವ ಪರಿವರ್ತಕಗಳು ಆಯಿಲ್ (ತೈಲ) ಟೈಪ್ ಪರಿವರ್ತಕಗಳಾಗಿರುತ್ತವೆ. ಇದು 500 ಕೆವಿಎ ತೈಲರಹಿತ ಡ್ರೈ ಟೈಪ್ ಪರಿವರ್ತಕವಾಗಿದೆ. ಇದರಿಂದ ಅಗ್ನಿ ಅವಘಡವಾಗುವುದನ್ನು ತಪ್ಪಿಸಬಹುದಾಗಿದೆ.
ಭೂಗತ ಪ್ರದೇಶದಲ್ಲಿ ಅಲ್ಲಿನ ಯಂತ್ರಗಳು ಕಾರ್ಯನಿರ್ವಹಿಸುವ ವೇಳೆ ಬಿಸಿಯಾಗದಂತೆ ತಾಪಮಾನ ನಿಯಂತ್ರಿತ ಮತ್ತು ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಮಳೆಯಾದಂತಹ ಸಮಯದಲ್ಲಿ ನೀರು ಸೋರಿದರೆ ಅದನ್ನು ಹೊರಗೆ ಹಾಕಲು ಸ್ವಯಂಚಾಲಿತ 1 ಎಚ್.ಪಿ. ವಾಟರ್ ಪಂಪ್, 2 ಕೆವಿಎ ಯುಪಿಎಸ್, ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳನ್ನು ಅಳವಡಿಸಲಾಗಿದೆ. 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯೂನಿಟ್ ಆಗಿದೆ. 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ ಅಳವಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.