

ಕಾರವಾರ: ಬಿವಿಕೆವೈಎಸ್ ಹೆಸರಿನ ಚೀನಾ ಬೋಟ್ ಉತ್ತರ ಕನ್ನಡ ಕಡಲ ತೀರದಲ್ಲಿ ಮೀನುಗಾರಿಕೆ ಮಾಡುತ್ತಿದೆ ಎಂಬ ವಿಚಾರವನ್ನು ಹೊನ್ನಾವರದ ಮೀನುಗಾರನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.
ಚೀನಾದ ಬೋಟ್ ಕಳೆದ ಕೆಲ ದಿನಗಳಿಂದ ಮೀನುಗಾರಿಕೆ ಮಾಡುತ್ತಿದೆ ಎಂಬ ಸುದ್ದಿ ಶರವೇಗದಲ್ಲಿ ಹರಡಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ. ಈ ವಿಷಯವನ್ನು ಯಾವುದೇ ಅಧಿಕಾರಿಗಳು, ಪೊಲೀಸರು ಖಚಿತಪಡಿಸಿಲ್ಲ. ಆದರೆ ಇದು ಮೀನುಗಾರ ಗ್ರೂಪ್ಗಳಲ್ಲಿ ಹರಿದಾಡುತ್ತಿದ್ದು, ಈ ವಿಚಾರವೀಗ ಆತಂಕ ಸೃಷ್ಟಿಸಿದೆ.
ಜನವರಿ 30ರಂದು ಹೊನ್ನಾವರದಿಂದ ಹೊರಟ ಪರ್ಶಿಯನ್ ಬೋಟ್ ಮೀನುಗಾರಿಕೆಗೆ 200 ನಾಟಿಕಲ್ ಮೈಲು ದೂರ ದಾಟಿ, 500 ನಾಟಿಕಲ್ ಮೈಲು ತಲುಪಿತ್ತು. ಇದೇ ವೇಳೆ ಸಮುದ್ರದಲ್ಲಿ ಫೆ.7ರಂದು ಚೀನಾದ ಅತ್ಯಾಧುನಿಕ ಯಾಂತ್ರಿಕ ಆಳ ಸಮುದ್ರ ಮೀನುಗಾರಿಕೆ ಬೋಟ್ ಮೀನುಗಾರಿಕೆಯಲ್ಲಿ ನಿರತವಾಗಿತ್ತು ಎಂದು ಹೇಳಲಾಗಿದ್ದು, ಅದನ್ನು ವಿಡಿಯೋ ಮಾಡಿಕೊಂಡ ಹೊನ್ನಾವರದ ಮೀನುಗಾರ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಗಿ ಹೇಳಲಾಗಿದೆ.
ಇದು ಚೀನಾದ್ದೇ ಅಥವಾ ಬೇರಾವುದೇ ದೇಶದ್ದೇ ಅಥವಾ ನಿಜವಾಗಲೂ ಈ ಬೋಟ್ ಇಲ್ಲಿಗೆ ಬಂದಿತ್ತೇ ಎಂಬ ಕುರಿತು ತನಿಖೆಯನ್ನು ಮಾಡಲಾಗುತ್ತಿದೆ.
ಭಾರತದ ಆಳ ಸಮುದ್ರ ಪ್ರದೇಶದಲ್ಲಿ ಚೀನಾ ಮೀನುಗಾರಿಕೆ ಬೋಟ್ ಕಂಡಿರುವುದಾಗಿ ವಿಡಿಯೋ ಮಾಡಿಕೊಂಡಿರುವ ಹೊನ್ನಾವರದ ಪರ್ಶಿಯನ್ ಬೋಟ್ ನ ಕಾರ್ಮಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಕರಾವಳಿ ಕಾವಲು ಪಡೆ ಜಾಗೃತವಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದೆ.
ಈ ಮಾಹಿತಿ ಅರಿತ ಕರಾವಳಿ ಕಾವಲು ಪಡೆ, 18 ನಾಟಿಕಲ್ ಮೈಲಿ ವರೆಗೆ ಚೀನಾ ಬೋಟ್ ಗೆ ಹುಡುಕಾಟ ನಡೆಸಿದ್ದು, ಬಳಿಕ ಸೀಬರ್ಡ್ ನೌಕಾನೆಲೆ ಸಿಬಂದಿ ಶೋಧ ಕಾರ್ಯ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ಚೀನಾ ಬೋಟ್ ಭಾರತದ ಸಮುದ್ರ ಗಡಿ ಪ್ರವೇಶಿಸಿಲ್ಲ ಎನ್ನಲಾಗಿದ್ದು, ಇದೀಗ ವಿಡಿಯೋ ಮಾಡಿದಾತನನ್ನೂ ಕರಾವಳಿ ಕಾವಲು ಪಡೆ ವಿಚಾರಣೆ ನಡೆಸಿದೆ. ಕೆಲ ದಿನಗಳ ಹಿಂದೆ ಕುಮಟಾ ಬಳಿಯ ಆಳಸಮುದ್ರದಲ್ಲಿ ಚೀನಾ ಬೋಟ್ ಬಂದಿದೆ ಎಂಬ ವದಂತಿ ಇತ್ತು. ಆಳ ಕಡಲಲ್ಲಿ ಕದಂಬ ನೌಕಾಪಡೆ ಯುದ್ಧನೌಕೆಗಳು ಕಾರವಾರದಿಂದ ನೇತ್ರಾಣಿವರೆಗೆ ಗಸ್ತು ತಿರುಗುತ್ತಿರುವ ಕಾರಣ, ಇಲ್ಲಿಗೆ ಚೀನಾ ಬೋಟ್ ಬಂದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.