

ಬೆಂಗಳೂರು: ಮುಡಾ (MUDA) ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ನೀಡಿದ್ದ ಅನುಮತಿ ಆದೇಶದವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಇತ್ತ ಸಿಎಂ ಅರ್ಜಿ ತಿರಸ್ಕಾರಗೊಳ್ಳುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷ ನಾಯಕರು ಈ ಬಗ್ಗೆ ಮಾತನಾಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ನೆಲದ ಕಾನೂನು ಮುರಿಯುವವರು ಎಷ್ಟೇ ದೊಡ್ಡವರಿರಲಿ ತಪ್ಪಿಸಿಕೊಳ್ಳವುದು ಸಾಧ್ಯವಿಲ್ಲ ಎನ್ನುವುದು ಈ ತೀರ್ಪಿನಿಂದ ಗೊತ್ತಾಗುತ್ತದೆ. ನ್ಯಾಯಪೀಠದ ಪೂರ್ಣ ಆದೇಶ ಅಧ್ಯಯನ ಮಾಡಿದ ನಂತರ ಮುಂದಿನ ಕ್ರಮದ ಬಗ್ಗೆ ಆಲೋಚಿಸುತ್ತೇವೆ. ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವವರಾದರೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ. ಇಲ್ಲವೇ ಅರವಿಂದ ಕೇಜ್ರಿವಾಲ್ ರೀತಿಯಲ್ಲಿ ಸಿಎಂ ಕುರ್ಚಿಗೆ ಅಂಟಿಕೊಂಡು ಕುಳಿತಿರುತ್ತಾರೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಡೀ ಹೈಕಮಾಂಡ್, ಎಲ್ಲ ಸಚಿವರು, ಇಡೀ ಪಕ್ಷ ಸಿದ್ದರಾಯ್ಯ ಜತೆ ಇದೆ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಏಕೆ ರಾಜೀನಾಮೆ ಕೊಡಬೇಕು. ಕಾನೂನು ಹೋರಾಟ ಮುಂದುವರಿಸಲಾಗುತ್ತದೆ. ಹೈಕೋರ್ಟ್ ಆದೇಶ ಸಿಎಂಗೆ ಹಿನ್ನಡೆಯಲ್ಲ. ತಪ್ಪಾಗಿದೆ ಎಂದಾಗ ಮಾತ್ರ ಹಿನ್ನಡೆ. ಈಗ ತನಿಖೆಗಷ್ಟೇ ಅವಕಾಶ ನೀಡಿರುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ರಾಜ್ಯಪಾಲರ ನಿರ್ಧಾರ ಅಕ್ರಮ ಎಂಬುದು ನಮ್ಮ ವಾದವಾಗಿತ್ತು. ಈಗ ಕೋರ್ಟ್ ತೀರ್ಪು ಕೊಟ್ಟಿದೆ. ಕೋರ್ಟ್ ತೀರ್ಪು ಗೌರವಿಸುತ್ತೇವೆ. ಸಿದ್ದರಾಮಯ್ಯ ರಾಜಿನಾಮೆ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಕುಮಾರಸ್ವಾಮಿ ಮೇಲೆ ಆರೋಪವಿದೆ, ಅವರು ರಾಜಿನಾಮೆ ಕೊಡಲಿ. ಇದು ಸಿದ್ದರಾಮಯ್ಯಗೆ ಸೆಟ್ ಬ್ಯಾಕ್ ಅಲ್ಲ. ಕೇವಲ ಅಭಿಯೋಜನೆ ಬಗ್ಗೆ ಕೋರ್ಟ್ ಅಭಿಪ್ರಾಯವಷ್ಟೇ ಎಂದಿದ್ದಾರೆ.
ಅರ್ಜಿದಾರ ಟಿ.ಜಿ. ಅಬ್ರಹಾಂ ಮಾತನಾಡಿ, ನಮ್ಮ ಅನುಮಾನಗಳು ಬಗೆಹರಿದಿದೆ. ಇಂದೇ ಸುಪ್ರಿಂಕೋರ್ಟಲ್ಲಿ ಕೇವಿಯೆಟ್ ಸಲ್ಲಿಸುತ್ತಿದ್ದೇವೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು, ಅವರು (ಸಿಎಂ) ಹೈಕೋರ್ಟ್‌ಗೆ ಬಂದರು, ನಾವು ಬಂದೆವು. ಮುಂದೆ ಅವರು ಸುಪ್ರಿಂಗೆ ಹೊರಟಿದ್ದಾರೆ. ನಾವೂ ಹೊರಟಿದ್ದೇವೆ ಎಂದು ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಇದೊಂದು ರಾಜಕೀಯ ಷಡ್ಯಂತ್ರ. ನನ್ನ ಮೇಲೂ ಬಿಜೆಪಿಯವರು ಇದೇ ರೀತಿ ಷಡ್ಯಂತ್ರ ಮಾಡಿ ಜೈಲಿಗೆ ಕಳುಹಿಸಿದ್ದರು. ಭಗವಂತನ ಕೃಪೆಯಿಂದ ಹೊರಗಡೆ ಬಂದಿದ್ದೇನೆ. ನನ್ನ ಪ್ರಕಾರ ಅವರದ್ದು ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಗಳಾಗಿ ಬದ್ಧತೆ ಇದೆ. ಅವರ ಜೊತೆಗೆ ನಾವಿದ್ದೇವೆ. ಅವರು ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಇದೊಂದು ರಾಜಕೀಯ ಸಂಘರ್ಷ. ರಾಜ್ಯಪಾಲರು ರಾಜಭವನವನ್ನು ರಾಜಕೀಯ ಕಚೇರಿ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಬಿಜೆಪಿಯವರು ಪ್ರಜಾಪ್ರಭುತ್ವ ದಮನ ಮಾಡುತ್ತಿದ್ದಾರೆ, ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರ ಅಸ್ಥಿರಗೊಳಿಸಿದ್ದಾರೆ, ಇಲ್ಲೂ ಪ್ರಯೋಗ ಮಾಡಿದ್ದಾರೆ. ತಕ್ಷಣವೇ ವಿಭಾಗೀಯ ಪೀಠದಲ್ಲಿ ಹೋರಾಟ ಮಾಡಲು ತಯಾರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.