ಆತ ಸಚಿನ್​ ಇದ್ದಂತೆ, ಯಾವುದರ ಬಗ್ಗೆಯೂ... ಕೊಹ್ಲಿ ಕುರಿತು ಮಾಜಿ ಆಟಗಾರನ ಹೇಳಿಕೆ ವೈರಲ್​

Virat Kohli
Published on

ನವದೆಹಲಿ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು, ಪ್ರವಾಸಿ ತಂಡಕ್ಕೆ ಶಾಕ್​ ನೀಡಿದ್ದಾರೆ. ಎದುರಾಳಿಗಳ ವಿರುದ್ಧ ಆಲ್ರೌಂಡ್​ ಪ್ರದರ್ಶನ ತೋರಿದ ಭಾರತ ತಂಡವು ಸರಣಿಯ ಮೊದಲ ಪಂದ್ಯದಲ್ಲಿ ಜಯ ಕಂಡಿದ್ದು, ಅಕ್ಟೋಬರ್​ 01ರಿಂದ ಕಾನ್ಪುರದಲ್ಲಿ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ.

ಬಾಂಗ್ಲಾ ವಿರುದ್ಧ ಸರಣಿಯಲ್ಲಿ ರನ್​ ಹೊಳೆ ಹರಿಸುವ ನಿರೀಕ್ಷೆಯನ್ನು ಹುಸಿಯಾಗಿಸಿರುವ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದಲ್ಲದೆ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡುವಾಗ ಔಟಿಲ್ಲದಿದ್ದರೂ ಡಿಆರ್​ಎಸ್​ ತೆಗೆದುಕೊಳ್ಳದೆ ಪೆವಿಲಿಯನ್​ ಸೇರಿದ್ದ ವಿರಾಟ್​ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್​ ಮಾಂಜ್ರೇಕರ್​ ಮಾತನಾಡಿದ್ದಾರೆ.

ಆತ ತವರಿನಲ್ಲಿ ಆಟವನ್ನು ಅನುಭವಿಸುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ. ಆತ ಒಂದು ರೀತಿ ಸಚಿನ್​ ತೆಂಡೂಲಕರ್​ ಇದ್ದಂತೆ. ತವರು ಸರಣಿಗಳಲ್ಲಿ ಹೆಚ್ಚು ರನ್​ ಗಳಿಸದೆ ವಿದೇಶ ಪ್ರವಾಸದಲ್ಲಿ ಆರ್ಭಟಿಸುತ್ತಾನೆ. ಆತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆತ ಆಟವಾಡಿದ ರೀತಿ ಮಾತ್ರ ಅದ್ಭುತವಾಗಿತ್ತು. ಇದು ಕೂಡ ಉತ್ತಮ ಬೆಳವಣಿಗೆಯಾಗಿದ್ದು, ತಂಡಕ್ಕೆ ಸಹಕಾರಿಯಾಗುತ್ತದೆ.

ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡುವ ವೇಳೆ ಔಟಿಲ್ಲದಿದ್ದರೂ ವಿರಾಟ್​ ಪೆವಿಲಿಯನ್​ಗೆ ಹೋಗಿದ್ದು ನೋಡಿ ನನಗೆ ಬೇಸರವಾಯಿತು. ಒಂದು ಕಡೆ ಗಿಲ್​ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಸೂಚಿಸುತ್ತಿದ್ದರು ವಿರಾಟ್​ ಔಟಾಗಿದ್ದೇನೆ ಎಂದು ಭಾವಿಸಿ ಮೈದಾನದಿಂದ ಹೊರನಡೆದರು. ಆ ಬಳಿಕ ಅದು ನಾಟ್​ಔಟ್​​ ಎಂದು ತಿಳಿದು ನನಗೆ ಅಯ್ಯೋ ಪಾಪ ಎನಿಸಿತು ಎಂದು ಟೀಮ್​ ಇಂಡಿಯಾ ಮಾಜಿ ಆಟಗಾರ ಸಂಜಯ್​ ಮಾಂಜ್ರೇಕರ್​ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net