

ಬೆಂಗಳೂರು: ಕನ್ನಡ ಚಿತ್ರ ರುದ್ರಿಗೆ ಮಧ್ಯಪ್ರದೇಶದಲ್ಲಿ ನಡೆದ ವಿಂಧ್ಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ. ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ನಿರ್ದೇಶಕ ಬಡಿಗೇರ ದೇವೇಂದ್ರ ಗಳಿಸಿದ್ದರೆ, ಚಿತ್ರದ ನಾಯಕನಟಿ ಪಾವನ ಗೌಡಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಇನ್ನೂ ಬಿಡುಗಡೆಗೆ ಕಾಯುತ್ತಿರುವ ರುದ್ರಿ ಚಿತ್ರವನ್ನು ಸಿ.ಆರ್.ಮಂಜುನಾಥ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಶೋಷಣೆ ಎದುರಿಸುತ್ತಿರುವ ಹಳ್ಳಿ ಹುಡುಗಿಯ ಪಾತ್ರ ಮಾಡಿರುವ ಪಾವನ ಮಾತನಾಡಿ, “ರುದ್ರಿ ತಂಡಕ್ಕೆ ಇದೊಂದು ಸ್ಮರಣೀಯ ಕ್ಷಣ. 46 ದೇಶಗಳ 350 ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು. ಅವುಗಳಲ್ಲಿ ರುದ್ರಿ ಎರಡನೇ ಸ್ಥಾನ ಗೆದ್ದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಚಿತ್ರದ ಬಿಡುಗಡೆಯನ್ನು ಎದುರುನೋಡುತ್ತಿದ್ದೇವೆ" ಎಂದಿದ್ದಾರೆ.
ಜುಲೈ 2020ರಲ್ಲಿ ಟಾಗೋರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ರುದ್ರಿ ಮೂರು ಪ್ರಶಸ್ತಿಗಳನ್ನು ಗೆದ್ದಿತ್ತು. ಇದೀಗ ಕರ್ನಾಟಕದಲ್ಲಿ ಚಿತ್ರ ಮಂದಿರಗಳು ತೆರೆದಿರುವುದರಿಂದ ಈ ವರ್ಷ ತಮ್ಮ ಚಿತ್ರವನ್ನು ತೆರೆ ಕಾಣಿಸಲು ಚಿತ್ರತಂಡ ಉತ್ಸುಕವಾಗಿದೆಯಂತೆ.