

ನಂಜನಗೂಡು: ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 37ನೇ ಪುಣ್ಯಾರಾಧನೆ ಪ್ರಯುಕ್ತ ಭಾನುವಾರ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ ಹಾಗೂ ರಾಜೇಂದ್ರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಪ್ರಾಕಾರೋತ್ಸವಗಳು ಸುತ್ತೂರು ವೀರಸಿಂಹಾಸನ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜರುಗಿತು.
2024ರ ಫೆಬ್ರವರಿ 6 ರಿಂದ 11ರವರೆಗೆ ಸುತ್ತೂರಿನಲ್ಲ್ಲಿ ಜರುಗುವ ಜಾತ್ರಾ ಮಹೋತ್ಸವದ ದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾಗೃಹ ಹಾಗೂ ಎಲ್ಲ ಮಂಟಪಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ 2024ನೇ ವರ್ಷದ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಪೂರ್ವಭಾವಿ ಸಭೆ: ಜಾತ್ರಾ ಮಹೋತ್ಸವ ವಿವಿಧ ಸಮಿತಿಗಳ ಸಂಚಾಲಕರು, ಸುತ್ತಮುತ್ತಲ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು. ವಾಟಾಳು, ಬೆಟ್ಟದಪುರ, ಹೊಸಮಠ, ಚಿಕ್ಕತುಪ್ಪೂರು, ದಂಡಿಕೆರೆ, ಹುಲಿಯೂರುದುರ್ಗ, ಮಾದಹಳ್ಳಿ, ಕುದೇರು, ಚುಂಚನಹಳ್ಳಿ, ನವಿಲೂರು, ಕುದೇರುಮಠ, ಕುಂದೂರು, ಮಾಡ್ರಳ್ಳಿ, ಮಾದಾಪುರ, ಹರವೆ, ಸಾಲೂರುಮಠ, ಪಡುಗೂರು, ಕಾಮಗೆರೆ, ನೀಲಕಂಠಸ್ವಾಮಿ ಮಠ, ನಂಜನಗೂಡು, ರಾಗಿಬೊಮ್ಮನಹಳ್ಳಿ, ಕಸುವಿನಹಳ್ಳಿ, ಗೌಡಳ್ಳಿ, ಕುರುಬೂರು, ಮುಡುಕುನಪುರ, ನರಗ್ಯಾತನಹಳ್ಳಿ, ಚಂದ್ರವನ ಆಶ್ರಮದ ಶ್ರೀಗಳು, ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.