ಕಾರಿನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ

Crime Logo
Published on

ಬೆಂಗಳೂರು: ಕಾರು ಚಾಲನೆಯ ತರಬೇತಿ ನೀಡುವಾಗ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮೀಪುರದ ೧೮ ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆ ಮುಗಿಸಿ ಮನೆಯಲ್ಲಿದ್ದ ಯುವತಿ ಕಾರು ಚಾಲನೆ ಕಲಿಯಲು ನಿರ್ಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನಲ್ಲಿ ನೋಂದಣಿ ಮಾಡಿಕೊಂಡು ಕಾರು ಚಾಲನೆ ಕೋರ್ಸ್ ಮುಗಿಸಿದ್ದಾರೆ. ಈ ವೇಳೆ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರ ಅಣ್ಣಪ್ಪನೇ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದಾರೆ. ಕೋರ್ಸ್ ಮುಗಿದ ಬಳಿಕ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ೭೫೦ ರೂ. ಕೊಡಬೇಕು ಎಂದು ಯುವತಿಗೆ ಹೇಳಿದ್ದಾನೆ. ಉತ್ತಮವಾಗಿ ಕಾರು ಚಾಲನೆಯ ಕಲಿಯುವ ಆಸಕ್ತಿಯಿಂದ ಯುವತಿ ೧೫ ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪನಿಗೆ ೧೦,೫೦೦ ರೂ. ಪಾವತಿಸಿದ್ದಾರೆ. ಅದರಂತೆ ಅಣ್ಣಪ್ಪ, ಜೂ.೨೬ರಂದು ವಿಶೇಷ ಕ್ಲಾಸ್ ಆರಂಭಿಸಿದ್ದಾನೆ. ಪ್ರತಿ ದಿನ ಯುವತಿಯ ಮನೆ ಬಳಿ ಬಂದು ಯುವತಿಯ ಕಾರಿನಲ್ಲೇ ಚಾಲನೆ ತರಬೇತಿ ನೀಡುತ್ತಿದ್ದ. ಜು.೭ರಂದು ಬೆಳಗ್ಗೆ ೬ ಗಂಟೆಗೆ ಯುವತಿ ಮನೆ ಬಳಿ ಬಂದಿರುವ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದಾನೆ.

ಅಸಭ್ಯ ವರ್ತನೆ:
ಬಸವೇಶ್ವರನಗರದ ನ್ಯಾಷನಲ್ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಪಕ್ಕದ ಆಸನದಲ್ಲಿ ಕುಳಿತ್ತಿದ್ದ ಅಣ್ಣಪ್ಪ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ, ಕಾರನ್ನು ಮನೆಗೆ ಕಡೆಗೆ ಚಲಾಯಿಸಿದ್ದಾರೆ. ಈ ವೇಳೆ ಅಣ್ಣಪ್ಪ ಎಚ್ಚೆತ್ತುಕೊಂಡು ಸುಮ್ಮನಾಗಿದ್ದಾನೆ. ಕಾರು ಚಾಲನೆ ತರಬೇತಿ ನೆಪದಲ್ಲಿ ಅನುಚಿತವಾಗಿ ವರ್ತಿಸಿ ಮುಜುಗರ ಉಂಟು ಮಾಡಿದ ಅಣ್ಣಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net