

ಕಾಸರಗೋಡು: ಅಣೆಕಟ್ಟು ನಿರ್ವಣದಲ್ಲೇ ವಿಶೇಷ ಪ್ರಯತ್ನವಾದ ರಬ್ಬರ್ ಅಣೆಕಟ್ಟು ದಕ್ಷಿಣ ಭಾರತದಲ್ಲೇ ಪ್ರಥಮವಾಗಿ ಕೇರಳದ ಕಾಸರಗೋಡಿನಲ್ಲಿ ಸಿದ್ಧಗೊಂಡಿದೆ. ಸಾಮಾನ್ಯವಾಗಿ ನಿರ್ವಿುಸುವ ಕಿಂಡಿ ಅಣೆಕಟ್ಟುಗಳಿಗೆ ಬೇಸಿಗೆಯಲ್ಲಿ ಹಲಗೆ ಅಳವಡಿಸುವುದು, ಮಣ್ಣು-ಮರಳು ತುಂಬುವುದು ಇತ್ಯಾದಿ ಜಂಜಾಟಗಳಿರುತ್ತವೆ. ದಿಢೀರ್ ಮಳೆ ಬಂದರೆ ಏನೂ ಮಾಡಲಾಗದು. ಹೂಳು ತುಂಬುವ ಸಮಸ್ಯೆಯೂ ಇರುತ್ತದೆ. ಆದರೆ, ರಬ್ಬರ್ನಿಂದ ನಿರ್ವಿುಸುವ ಅಣೆಕಟ್ಟು ಹೊಸ ತಂತ್ರಜ್ಞಾನದಿಂದ ಕೂಡಿದ್ದು, ಬೇಕೆಂದಾಗ ರಬ್ಬರ್ ಟ್ಯೂಬ್ಗೆ ನೀರು ಅಥವಾ ಗಾಳಿ ತುಂಬಿಸಿ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಬಹುದು. ಎತ್ತರವನ್ನೂ ಬೇಕಾದಷ್ಟು ನಿರ್ಧರಿಸಬಹುದು. ಹೂಳು ತುಂಬುವ ಅಪಾಯವೂ ಇಲ್ಲ.
ಚೀನಾ, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಈ ತಂತ್ರಜ್ಞಾನ ವ್ಯಾಪಕವಾಗಿದ್ದು, ಪ್ರಸಕ್ತ ಭಾರತದಲ್ಲೂ ಗಮನ ಸೆಳೆಯುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಮೇಘಾಲಯ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಲ್ಲಿ ಈಗಾಗಲೆ ನಿರ್ವಣಗೊಂಡು ಯಶಸ್ಸು ಪಡೆದಿದೆ. ದಕ್ಷಿಣ ಭಾರತದ ಪೈಕಿ ತಮಿಳುನಾಡಿನ ಉದಕಮಂಡಲದಲ್ಲಿ ಪ್ರಾಯೋಗಿಕವಾಗಿ ನಿರ್ವಿುಸಲಾಗಿತ್ತು. ಆದರೆ, ಪ್ರಥಮ ರಬ್ಬರ್ ಅಣೆಕಟ್ಟು ನಿರ್ವಿುಸಿರುವುದು ಕೇರಳದಲ್ಲಿ. ಕೇರಳದ ಐದು ಜಿಲ್ಲೆಗಳಲ್ಲಿ ರಬ್ಬರ್ ಡ್ಯಾಂ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ಕಾಸರಗೋಡಿನ ಪನತ್ತಡಿ ಪಂಚಾಯಿತಿಯಲ್ಲಿ ನಿರ್ವಣಗೊಂಡಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಅಧೀನದ ಭುವನೇಶ್ವರದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಮ್ಯಾನೇಜ್ವೆುಂಟ್ನ ತಾಂತ್ರಿಕ ಸಹಕಾರದೊಂದಿಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಾಮಗಾರಿ ನಡೆಸಲಾಗಿದೆ. 1.5 ಮೀಟರ್ನಿಂದ 2.5 ಮೀ. ಎತ್ತರದವರೆಗೆ ರಬ್ಬರ್ ಡ್ಯಾಂ ನಿರ್ವಿುಸಬಹುದು.
48 ಲಕ್ಷ ರೂ. ವೆಚ್ಚ: ಪನತ್ತಡಿ ಮಾನಡ್ಕ ಸಮೀಪದ ಕೋಳಿಚ್ಚಾಲ್ ರಸ್ತೆಯ ತೋಡಿಗೆ ತಿಮ್ಮಂಚಾಲ್ ಎಂಬಲ್ಲಿ ಈ ರಬ್ಬರ್ ಡ್ಯಾಂ ನಿರ್ವಿುಸಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ 2.5 ಮೀಟರ್ ಎತ್ತರ, 10 ಮೀಟರ್ ಅಗಲದಲ್ಲಿ ನಿರ್ವಿುಸಿರುವ ಈ ಡ್ಯಾಂಗೆ 48 ಲಕ್ಷ ರೂ. ವೆಚ್ಚವಾಗಿದೆ. 400 ಮೀ.ವರೆಗೂ ತೋಡಿನಲ್ಲಿ ನೀರು ದಾಸ್ತಾನುಗೊಳ್ಳುತ್ತಿದೆ. ಸೋರಿಕೆಯಿಲ್ಲದೆ ನೀರು ದಾಸ್ತಾನುಗೊಳ್ಳುತ್ತಿದ್ದು, ಕೃಷಿ ಕಾರ್ಯಗಳಿಗೆ ವರದಾನವಾಗಿರುವುದಾಗಿ ಕೃಷಿಕರು ಅಭಿಪ್ರಾಯಪಡುತ್ತಾರೆ.
ಹೇಗೆ ನಿರ್ವಣ?: ತಳಭಾಗಕ್ಕೆ ಕಾಂಕ್ರೀಟ್ ಅಳವಡಿಸಿ ಸಮತಟ್ಟುಗೊಳಿಸಿ, ತೋಡಿನ ಎರಡೂ ಬದಿ ಕಾಂಕ್ರೀಟ್ ತಡೆಗೋಡೆ ನಿರ್ವಿುಸಲಾಗಿದೆ. ತಳಭಾಗದಲ್ಲಿ ವಿಶೇಷವಾಗಿ ನಿರ್ವಿುಸಿದ ರಬ್ಬರ್ ಟ್ಯೂಬ್ಗಳನ್ನಿರಿಸಿ ಅದರ ಮೇಲೆ ದಪ್ಪದ ರಬ್ಬರ್ ಹಾಳೆಯನ್ನು ವ್ಯವಸ್ಥಿತವಾಗಿ ಅಳವಡಿಸಲಾಗುತ್ತದೆ. ಅಣೆಕಟ್ಟಿನಲ್ಲಿ ನೀರು ನಿಲ್ಲಿಸಬೇಕೆಂದರೆ ಟ್ಯೂಬ್ಗೆ ಗಾಳಿ ಅಥವಾ ನೀರು ತುಂಬಿಸಬೇಕು. ನೀರು ನಿಲ್ಲಿಸುವುದು ಬೇಡವೆಂದರೆ ಟ್ಯೂಬ್ನಿಂದ ನೀರು ಅಥವಾ ಗಾಳಿಯನ್ನು ಹೊರಬಿಟ್ಟರಾಯಿತು. ಮಳೆಗಾಲದಲ್ಲಿ ನೆರೆ ಬಂದರೂ ಹಾನಿಗೊಳಗಾಗದ ರೀತಿಯ ರಬ್ಬರ್ ಪರಿಕರಗಳನ್ನು ಅಳಡಿಸಲಾಗಿದ್ದು, ಹರ್ಯಾಣದಿಂದ ತರಿಸಿಕೊಳ್ಳಲಾಗಿದೆ. ನೀರು ಹೊರ ಹರಿಯಲು ನಾಬ್ ಅಳವಡಿಸಲಾಗಿದೆ.
|ಶ್ರೀಪಡ್ರೆ ಜಲತಜ್ಞ