

ಬೆಂಗಳೂರು: ಸಾಲದ ಕಂತು ಕಟ್ಟಲಾಗದೆ ಫೈನಾನ್ಸ್ ಸಂಸ್ಥೆಗಳು ಹಾಗೂ ಪ್ರತಿಷ್ಠಿತ ಬ್ಯಾಂಕ್ಗಳಿಂದ ಜಪ್ತಿಯಾಗಿರುವ ಖಾಸಗಿ ಬಸ್ಗಳಿಂದ ಬರಬೇಕಾದ ತೆರಿಗೆ ಹಣ ವಸೂಲಿಗಾಗಿ ಕೈಗೊಂಡಿರುವ ಕಾರ್ಯಾ ಚರಣೆ ಮುಂದುವರಿಸಿರುವ ಆರ್ಟಿಒ ಅಧಿಕಾರಿಗಳು, ಬೆಂಗಳೂರಿನ 2 ಯಾರ್ಡ್ಗಳಲ್ಲಿ ನಿಲ್ಲಿಸಿದ್ದ 76 ಬಸ್ಗಳನ್ನು ಪತ್ತೆಹಚ್ಚಿದ್ದು, ಬರೋಬ್ಬರಿ 4.71 ಕೋಟಿ ರೂ. ತೆರಿಗೆ ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ.
ಸಾರಿಗೆ ಇಲಾಖೆ (ಬೆಂಗಳೂರು ವಿಭಾಗ) ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ನೇತೃತ್ವದಲ್ಲಿ ಹಿರಿಯ ಇನ್ಸ್ಪೆಕ್ಟರ್ ರಾಜಣ್ಣ ಮತ್ತವರ ತಂಡ ಕಾರ್ಯಾಚರಣೆ ನಡೆಸುತ್ತಿದೆ. ರಾಜರಾಜೇಶ್ವರಿನಗರದ ಪಟ್ಟಣಗೆರೆ ಯಾರ್ಡ್ನಲ್ಲಿ 63 ಬಸ್ ಹಾಗೂ ಮೈಸೂರು ರಸ್ತೆ ಮೂಕಾಂಬಿಕಾ ಲೇಔಟ್ ಯಾರ್ಡ್ನಲ್ಲಿ 13 ಬಸ್ ಪತ್ತೆಹಚ್ಚಲಾಗಿದೆ.
ಕೆಲ ಬಸ್ಗಳ ತೆರಿಗೆ 2017ರಿಂದಲೂ ಪಾವತಿಸಿಲ್ಲ. 9 ಲಕ್ಷ ರೂ.ವರೆಗೆ ಬಾಕಿ ಕಟ್ಟಬೇಕಿದೆ. ಬೆಂಗಳೂರಿನ ಕುಂಬಳಗೋಡು ಸಮೀಪದ ಗೋಣಿಪುರ ಹಾಗೂ ತಾವರೆಕೆರೆ ಬಳಿಯ 2 ಯಾರ್ಡ್ಗಳಲ್ಲೇ ಪತ್ತೆಯಾದ 20 ಬಸ್ಗಳಿಂದ 1.70 ಕೋಟಿ ರೂ. ತೆರಿಗೆ ಬಾಕಿ ಇದೆ. ಈಗ 76 ಬಸ್ಗಳಿಂದ 4.71 ಕೋಟಿ ರೂ. ವಸೂಲಿ ಆಗಬೇಕಿದೆ. ಸಂಬಂಧಪಟ್ಟವರಿಗೆ ನೋಟಿಸ್ ಕೊಡಲು ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ. ಜಪ್ತಿ ಮಾಡಿರುವ ಬಸ್ಗಳನ್ನು ನಿಲ್ಲಿಸಿರುವ ಯಾರ್ಡ್ಗಳ ಮಾಹಿತಿ ಸಂಗ್ರಹಿಸಿರುವ ತಂಡ, ಇಲಾಖೆಗೆ ವರದಿ ಸಲ್ಲಿಸಿದೆ.