

| ಕೀರ್ತಿನಾರಾಯಣ ಸಿ. ಬೆಂಗಳೂರು
ಐಶಾರಾಮಿ ಕಾರುಗಳ ಅಕ್ರಮ ನೋಂದಣಿ ಮೂಲಕ ರಸ್ತೆತೆರಿಗೆ ವಂಚಿಸಿರುವ ಪ್ರಕರಣ ಬಗೆದಷ್ಟೂ ಆಳಕ್ಕೆ ಹೋಗುತ್ತಿದ್ದು, ವಾಹನ ಮಾರಾಟ ಶೋರೂಂ ಡೀಲರ್ಗಳ ಜತೆ ಆರ್ಟಿಒ ಅಧಿಕಾರಿಗಳು ಹಾಗೂ ಸಿಬ್ಬಂದಿ ‘ಡೀಲ್’ ಕುದುರಿಸಿಕೊಂಡು ಅವ್ಯವಹಾರ ನಡೆಸಿರುವುದು ಬಹಿರಂಗವಾಗಿದೆ. ಇದರ ಬೆನ್ನಲ್ಲೇ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸಲು ಮೂವರು ಹಿರಿಯ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚಿಸಿ ಸಾರಿಗೆ ಆಯುಕ್ತರು ಆದೇಶಿಸಿದ್ದಾರೆ.
ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ್, ಹೊಸಪೇಟೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಈಶ್ವರ್ ಚೌವ್ಹಾಣ್ ಮತ್ತು ಬೆಂಗಳೂರು ಪೂರ್ವ ವಿಭಾಗದ ಆರ್ಟಿಒ ಕಚೇರಿಯ ವಿ.ನಾಗರಾಜಾಚಾರ್ ತನಿಖಾ ಸಮಿತಿಯಲ್ಲಿದ್ದಾರೆ. ತೆರಿಗೆ ವಂಚಿಸಿರುವ ವಾಹನಗಳ ಕುರಿತು ಬೆಂಗಳೂರು ಕೇಂದ್ರದ ಎಆರ್ಟಿಒ ಎ.ವಿ.ಪ್ರಸಾದ್ ನೇತೃತ್ವದ ತಂಡ ಕೊಟ್ಟಿರುವ ಮಧ್ಯಂತರ ವರದಿ ಆಧರಿಸಿ ತನಿಖೆ ನಡೆಸಲು ಸಮಿತಿಗೆ ಸೂಚಿಸಲಾಗಿದೆ.
ಡೀಲರ್ಗಳಿಗೆ ನೋಟಿಸ್: ಕಾರು ತಯಾರಿಕಾ ಕಂಪನಿ ಗಳು ನಿಗದಿಪಡಿಸಿರುವ ದರದ ಬದಲಿಗೆ ಶೋರೂಂ ಡೀಲರ್ಗಳು, ಇನ್ವಾಯ್್ಸಲ್ಲಿ ಅಸಲಿ ದರಕ್ಕಿಂತ ಕಡಿಮೆ ದರ ನಮೂದು ಮಾಡಿ ಮಾರಾಟ ಮಾಡಿದ್ದಾರೆ. ಕಾನೂನು ಪ್ರಕಾರ ಕಂಪನಿ ನಿಗದಿಪಡಿಸಿರುವ ದರದಲ್ಲೇ ಮಾರಾಟ ಮಾಡಬೇಕು. ಒಬ್ಬೊಬ್ಬರಿಗೆ ಒಂದೊಂದು ದರಕ್ಕೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಸಲಿ ದರಪಟ್ಟಿ ಮಾಹಿತಿ ನೀಡುವಂತೆ ಕಂಪನಿಗಳಿಗೆ ಸೂಚಿಸಿದ್ದು, ವಿವರಣೆ ಕೋರಿ ಶೋರೂಂ ಡೀಲರ್ಗಳಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಜಿಎಸ್ಟಿ ಕಮಿಷನರ್ ಗಮನಕ್ಕೆ: ವಾಹನ ನೋಂದಣಿ ವೇಳೆ ಶೇ.20 ರಸ್ತೆ ತೆರಿಗೆ ಹಾಗೂ ಶೇ.28 ಜಿಎಸ್ಟಿ ಕಟ್ಟಿಸಿಕೊಳ್ಳಬೇಕು. ಆದರೆ, ಅಕ್ರಮವಾಗಿ ವಾಹನಗಳನ್ನು ನೋಂದಣಿ ಮಾಡಿ ಸರ್ಕಾರಕ್ಕೆ ತೆರಿಗೆ ಹಾಗೂ ಜಿಎಸ್ಟಿ ವಂಚಿಸಲಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು, ಜಿಎಸ್ಟಿ ಕಮಿಷನರ್ ಗಮನಕ್ಕೆ ತಂದಿದ್ದು, ಜಿಎಸ್ಟಿ ವಂಚನೆ ಬಗ್ಗೆ ಪ್ರತ್ಯೇಕ ತನಿಖೆ ನಡೆಯಲಿದೆ.
ಇನ್ಸ್ಪೆಕ್ಟರ್ಗಳ ಜತೆ ಗಲಾಟೆ: ಅಕ್ರಮವಾಗಿ ನೋಂದಣಿ ಯಾಗಿರುವ 278 ಕಾರುಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸಾರಿಗೆ ಆಯುಕ್ತರ ಸೂಚನೆ ಮೇರೆಗೆ ಶುಕ್ರವಾರ ವಾಹನಗಳ ಜಪ್ತಿ ಮಾಡಲು ಹೋದ ಇನ್ಸ್ಪೆಕ್ಟರ್ಗಳ ಜತೆ ಮಾಲೀಕರು ಗಲಾಟೆ ಮಾಡಿದ್ದಾರೆ. ವಾಹನ ಖರೀದಿ ಸಂದರ್ಭದಲ್ಲೇ ಟ್ಯಾಕ್ಸ್ ಕಟ್ಟಿದ್ದೇವೆ ಎಂದು ವಾದಿಸಿದ್ದಾರೆ. ದಾಖಲೆ ಕೊಡಲು ಸಮಯಾವಕಾಶ ಕೊಡಲಾಗಿದೆ.
ಕೋರ್ಟ್ ಮೆಟ್ಟಿಲೇರಲು ಸಿದ್ಧತೆ: ತೆರಿಗೆ ವಂಚಿಸಿರುವ ಬಗ್ಗೆ ವಾಹನ ಮಾಲೀಕರಿಗೆ ಆರ್ಟಿಒ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಖರೀದಿ ಸಂದರ್ಭದಲ್ಲೇ ತೆರಿಗೆ ಪಾವತಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪಿಲ್ಲ. ಅಧಿಕಾರಿಗಳೇ ಇದಕ್ಕೆ ಹೊಣೆ ಎಂದು ಕೆಲ ಮಾಲೀಕರು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
ತಪ್ಪಿತಸ್ಥರು ಗೊತ್ತಿದ್ದರೂ ಕ್ರಮ ಏಕಿಲ್ಲ: ಅಕ್ರಮ ನೋಂದಣಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಯಾರೆಂಬುದು ಗೊತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ, ವಾಹನ ಜಪ್ತಿ ಮಾಡುವ ಜವಾಬ್ದಾರಿಯನ್ನು ನಮಗೆ ವಹಿಸಲಾಗಿದೆ ಎಂದು ಬ್ರೇಕ್ ಇನ್ಸ್ಪೆಕ್ಟರ್ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.