

ಶಿವಮೊಗ್ಗ: ಆನ್ಲೈನ್ ಕ್ಲಾಸ್ಗೆಂದು ನೆಟ್ವರ್ಕ್ ಹುಡುಕುತ್ತ ಗುಡ್ಡ ಪ್ರದೇಶದತ್ತ ಹೋಗುತ್ತಿದ್ದ ಯುವತಿಯನ್ನು ಯುವಕನೊಬ್ಬ ಅಡ್ಡಗಟ್ಟಿ ಮೊಬೈಲ್ ಫೋನ್ ಕಸಿದುಕೊಂಡು ಕಿರುಕುಳ ಕೊಟ್ಟ ಪ್ರಕರಣ ನಡೆದಿದೆ. ಊರಿನವರಿಗೆ ವಿಷಯ ತಿಳಿಯುತ್ತಿದ್ದಂತೆ ಮೊಬೈಲ್ಫೋನ್ ಹಾಗೂ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಾರಲಗೋಡು ಸಮೀಪ ಈ ಘಟನೆ ನಡೆದಿದೆ. ಆನ್ಲೈನ್ ಕ್ಲಾಸ್ಗಾಗಿ ಯುವತಿಯೊಬ್ಬಳು ಮನೆಯಿಂದ ಅನತಿ ದೂರದ ಎತ್ತರದ ಪ್ರದೇಶಕ್ಕೆ ಹೋಗುತ್ತಿದ್ದಾಗ ಯುವಕನೊಬ್ಬ ದಾರಿಯಲ್ಲಿ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ.
ಈ ಬಗ್ಗೆ ವಿಷಯ ತಿಳಿದು ಸ್ಥಳೀಯರು ಧಾವಿಸುತ್ತಿದ್ದಂತೆ ಮೊಬೈಲ್ಫೋನ್ ಹಾಗೂ ಬೈಕ್ ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಕಿರುಕುಳ ಕೊಟ್ಟವ ಸಾಗರ ತಾಲೂಕಿನ ಅರಳಗೋಡು ಗ್ರಾಮದ ಯುವಕ ಎನ್ನಲಾಗಿದೆ. ಕಿರುಕುಳ ಕೊಟ್ಟವನಿಗಾಗಿ ಈಗ ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಲೆನಾಡು ಭಾಗದಲ್ಲಿ ಆನ್ಲೈನ್ ಕ್ಲಾಸ್ ಹಾಗೂ ವರ್ಕ್ ಫ್ರಂ ಹೋಮ್ನಲ್ಲಿರುವವರು ನೆಟ್ವರ್ಕ್ ಹುಡುಕಿಕೊಂಡು ಗುಡ್ಡ ಏರುವ ಪರಿಸ್ಥಿತಿ ಸಾಮಾನ್ಯವಾಗಿದೆ. ನೆಟ್ವರ್ಕ್ಗಾಗಿ ಈವರೆಗೆ ರೂಪಿಸಿದ ಎಲ್ಲ ಹೋರಾಟಗಳು ವ್ಯರ್ಥವಾಗಿವೆ. ಶರಾವತಿ ಹಿನ್ನೀರವಾಸಿಗಳ ಬೇಡಿಕೆಯನ್ನು ಪರಿಗಣಿಸದೆ ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.