

ದೇಶದಲ್ಲಿ ಗುಜರಿ ನೀತಿ ಜಾರಿಗೊಂಡು 15 ವರ್ಷ ತುಂಬಿದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಜ್ಯದ ಕೆಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ಟಿಒ) ‘ಫಿಟ್ನೆಸ್ ಸರ್ಟಿಫಿಕೇಟ್’ (ಎಫ್ಸಿ) ದಂಧೆ ಮಿತಿಮೀರಿದೆ. ದುಡ್ಡು ಕೊಟ್ಟರೆ ಸಂಚಾರಕ್ಕೆ ಯೋಗ್ಯವಲ್ಲದ ಹಾಗೂ ಸುರಕ್ಷತಾ ಕ್ರಮಗಳಿರದ ವಾಹನಗಳಿಗೂ ಎಫ್ಸಿ ಕೊಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಏತನ್ಮಧ್ಯೆ ಎಫ್ಸಿ ವಿತರಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹೊಸ ವರ್ಷದಿಂದ ಎಲ್ಲ ಆರ್ಟಿಒ ಕಚೇರಿಗಳಲ್ಲಿ ಜಿಯೋ ಫೆನ್ಸಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಸಾರಿಗೆ ಇಲಾಖೆ ತಯಾರಿ ನಡೆಸಿದೆ. ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ಬೇರೆಬೇರೆ ರಾಜ್ಯಗಳ ಹಳೇ ವಾಹನಗಳಿಗೂ ಬೆಂಗಳೂರು ಸೇರಿ ರಾಜ್ಯದ ಕೆಲ ಆರ್ಟಿಒ ಕಚೇರಿಗಳಲ್ಲಿ ಎಫ್ಸಿ ಕೊಡಲಾಗಿದೆ. ಈ ಕುರಿತು ‘ವಿಜಯವಾಣಿ’ಗೆ ದಾಖಲೆಗಳು ಲಭ್ಯವಾಗಿದ್ದು, ಕೆಲ ಆರ್ಟಿಒ ಕಚೇರಿಗಳಲ್ಲಿ ತಲಾ ವಾಹನಕ್ಕೆ 5 ರಿಂದ 10 ಸಾವಿರ ರೂ. ಪಡೆದು ಒಂದೇ ದಿನ ನೂರಾರು ವಾಹನಗಳಿಗೆ ಎಫ್ಸಿ ಕೊಟ್ಟಿರುವುದು ದೃಢಪಟ್ಟಿದೆ.
ಸದ್ಯ ರಾಜ್ಯದಲ್ಲಿ ವಾಹನಗಳನ್ನು ಬ್ರೇಕ್ ಇನ್ಸ್ಪೆಕ್ಟರ್ಗಳು ಭೌತಿಕವಾಗಿ ಪರಿಶೀಲನೆ ನಡೆಸಿ, ಎಫ್ಸಿ ಕೊಡುವ ಪದ್ಧತಿ ಜಾರಿಯಲ್ಲಿದೆ. ಮಾನವ ಹಸ್ತಕ್ಷೇಪ ಇಲ್ಲದೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಲ್ಲೇ (ಎಟಿಎಸ್) ವಾಹನಗಳನ್ನು ತಪಾಸಣೆ ನಡೆಸುವ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅರ್ಹತೆ ಹೊಂದಿರುವ ವಾಹನಕ್ಕೆ ಮಾತ್ರವೇ ಎಫ್ಸಿ ವಿತರಿಸಬೇಕು ಎಂದು ನಿಯಮ ರೂಪಿಸಿದೆ. ಕರ್ನಾಟಕದಲ್ಲಿ ಬೆಂಗಳೂರಿನ ನೆಲಮಂಗಲ, ಮೈಸೂರು ಹಾಗೂ ಧಾರವಾಡದಲ್ಲಿ ಮಾತ್ರವೇ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳಿವೆ. ಬಹುತೇಕ ಆರ್ಟಿಒ ಕಚೇರಿಗಳಲ್ಲಿ ಭೌತಿಕವಾಗಿಯೇ ವಾಹನಗಳನ್ನು ಪರಿಶೀಲನೆ ಮಾಡಿ ಎಫ್ಸಿ ಕೊಡುವ ಪದ್ಧತಿ ಇದೆ. ರಾಜ್ಯದ ಯಾವುದೇ ಆರ್ಟಿಒ ಕಚೇರಿಯಲ್ಲಿ ಬೇಕಾದರೂ ವಾಹನಕ್ಕೆ ಎಫ್ಸಿ ಮಾಡಿಸಲು ಅವಕಾಶ ಇದೆ. ಈ ಅವಕಾಶ ದುರ್ಬಳಕೆಯಾಗುತ್ತಿದ್ದು, ಕೆಲ ನಿರ್ದಿಷ್ಟ ಕಚೇರಿಗಳಲ್ಲಿ ಮಾತ್ರ ಅವ್ಯವಹಾರ ನಡೆಯುತ್ತಿದೆ. ಆರ್ಟಿಒಗಳಲ್ಲಿ ಮಧ್ಯವರ್ತಿಗಳೇ ಎಫ್ಸಿ ದಂಧೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಒಂದು ಕಚೇರಿಯಲ್ಲಿ ಪ್ರತಿನಿತ್ಯ 200 ರಿಂದ 300 ವಾಹನಗಳಿಗೆ ನಿಯಮಬಾಹಿರವಾಗಿ ಎಫ್ಸಿ ಕೊಡಲಾಗುತ್ತಿದೆ.
ಸಂಚಾರಕ್ಕೆ ಯೋಗ್ಯವಲ್ಲದ ವಾಹನಗಳಿಗೆ ಎಫ್ಸಿ ವಿತರಿಸುತ್ತಿರುವ ಬಗ್ಗೆ ದೂರು ಕೊಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ಪಾರದರ್ಶಕತೆ ತರುವ ಉದ್ದೇಶದಿಂದ ಎಲ್ಲ ಆರ್ಟಿಒ ಕಚೇರಿಗಳಲ್ಲೂ ಜಿಯೋ ಫೆನ್ಸಿಂಗ್ ವ್ಯವಸ್ಥೆ ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ. | ಎ.ಎಂ.ಯೋಗೀಶ್ ಸಾರಿಗೆ ಆಯುಕ್ತರು
ಹೊಸದಾಗಿ ನೇಮಕಗೊಂಡಿರುವ ಬ್ರೇಕ್ ಇನ್ಸ್ಪೆಕ್ಟರ್ಗಳಿಂದ ಅಕ್ರಮ ಪ್ರಕರಣಗಳು ಜಾಸ್ತಿಯಾಗಿವೆ ಎಂದು ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ. ಸರಿಯಾದ ರೀತಿ ಟ್ರೇನಿಂಗ್ ಪಡೆದಿಲ್ಲ. ಕೆಲಸ ಮಾಡುವುದು ಹೇಗೆ ಎಂಬುದು ತಿಳಿದಿಲ್ಲ. ಹಲವರ ವಿರುದ್ಧ ಸಾರಿಗೆ ಸಚಿವರು ಹಾಗೂ ಆಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ ಕೆಲವೊಂದು ಆರ್ಟಿಒ ಕಚೇರಿಗಳಲ್ಲಿ ಎಫ್ಸಿ ದಂಧೆಯಿಂದಲೇ 3 ರಿಂದ 5 ಲಕ್ಷ ರೂ.ವರೆಗೆ ಲಂಚದ ಹಣ ಗಳಿಕೆಯಾಗುತ್ತಿದೆ. ಸುಲಭವಾಗಿ ಎಫ್ಸಿ ಸಿಗುತ್ತದೆಂಬ ಕಾರಣಕ್ಕಾಗಿಯೇ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ನಿರ್ದಿಷ್ಟ ಆರ್ಟಿಒ ಕಚೇರಿಗಳಿಗೆ ವಾಹನಗಳನ್ನು ತರಲಾಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆ ಆಯುಕ್ತರು ಹಾಗೂ ಸಚಿವರು ಎಚ್ಚರಿಕೆ ವಹಿಸಬೇಕು ಎಂಬ ಮನವಿ ಕೇಳಿಬಂದಿದೆ.
ಗುಜರಾತ್ ಮತ್ತು ಮಹಾರಾಷ್ಟ್ರದ 20 ವರ್ಷ ಹಳೆಯ ವಾಹನಗಳಿಗೆ ಮಲೆನಾಡು ಭಾಗದ ಆರ್ಟಿಒ ಕಚೇರಿಯಲ್ಲಿ ಎಫ್ಸಿ ಕೊಡಲಾಗಿದೆ. 1400ರಿಂದ 1800 ಕಿ.ಮೀ ಪ್ರಯಾಣಿಸಿ ಬಂದು ಎಫ್ಸಿ ಪಡೆಯಲಾಗುತ್ತದೆ. ಇದೊಂದೇ ಕಚೇರಿಯಲ್ಲಿ ಅ.3ರಂದು ಗುಜರಾತ್ನ ಅಂದಾಜು 85 ವಾಹನ ಹಾಗೂ ಮಹಾರಾಷ್ಟ್ರದ 45 ವಾಹನಗಳಿಗೆ ಎಫ್ಸಿ ಕೊಡಲಾಗಿದೆ. ಅಲ್ಲದೆ, ರಾಜ್ಯದ ಬೇರೆ ಜಿಲ್ಲೆಗಳ 17 ವಾಹನಗಳಿಗೆ ಸರ್ಟಿಫಿಕೇಟ್ ವಿತರಣೆಯಾಗಿದೆ. ಅ.4ರಂದು ಗುಜರಾತ್ನ 85 ಹಾಗೂ ಮಹಾರಾಷ್ಟ್ರದ 22 ವಾಹನ ಮತ್ತು ರಾಜ್ಯದ 29 ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲಾಗಿದೆ.