

ಬೆಂಗಳೂರು: ತಮ್ಮ ಗ್ರಾಮದಲ್ಲಿ ಯಾರ್ಯಾರು ಯಾವ್ಯಾವ ಸರ್ಕಾರಿ ಯೋಜನೆ ಲಾಭ ಪಡೆಯುತ್ತಿದ್ದಾರೆ? ಊರಿನಲ್ಲಿ ನರೇಗಾ ಕಾಮಗಾರಿ ಮಾಡಿದವರು ಯಾರು? ಕಾಮಗಾರಿ ಎಲ್ಲಿ ನಡೆದಿದೆ? ವಿದ್ಯಾರ್ಥಿ ವೇತನ ಯಾರೆಲ್ಲ ಪಡೆಯುತ್ತಿದ್ದಾರೆ? ನಿಮ್ಮೂರಿನ ಶಾಲೆ ಶಿಕ್ಷಕರು ಯಾರು, ಅವರ ಮೊಬೈಲ್ ಸಂಖ್ಯೆ ಏನು? ಮತ್ತಿತರ ಯಾವುದೇ ವಿಚಾರದ ಕುರಿತಾದರೂ ಆರ್ಟಿಐ ಅರ್ಜಿ ಹಾಕದೆಯೂ ಇನ್ಮುಂದೆ ಮಾಹಿತಿ ಪಡೆಯಬಹುದು! ಸರ್ಕಾರ ಇಂಥದ್ದೊಂದು ವಿನೂತನ ಪ್ರಯತ್ನ ಆರಂಭಿಸಿದ್ದು, ಮಾಹಿತಿ ಕಣಜ ಪೋರ್ಟಲ್ನಲ್ಲಿ ವಿವಿಧ ಸರ್ಕಾರಿ ಯೋಜನೆಗಳು, ಸೇವೆಗಳ ಕುರಿತು ನಾಗರಿಕರಿಗೆ ಬೆರಳ ತುದಿಯಲ್ಲೆ ಮಾಹಿತಿ ಲಭ್ಯವಾಗಲಿದೆ. ಸರ್ಕಾರದ ಮಾಹಿತಿ ಪಡೆಯಲು ಅರ್ಜಿ ಏಕೆ ಬೇಕು ಎಂಬ ಕಲ್ಪನೆಯಲ್ಲಿ ಕನಿಷ್ಠ ಪ್ರಮಾಣದ ಮಾಹಿತಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಪರ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ, ಮಾಹಿತಿ ಕಣಜ ಪೋರ್ಟಲ್ ಸಾರ್ವಜನಿಕ ಮಾಹಿತಿ ವ್ಯವಸ್ಥೆಯಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ನಾಗರಿಕರಿಗೆ ನಿರ್ದಿಷ್ಟ ಮಾಹಿತಿ ಒದಗಿಸುವ ಏಕಗವಾಕ್ಷಿ ಮತ್ತು ಏಕೀಕೃತ ಪೋರ್ಟಲ್ ಆಗಿದೆ ಎಂದು ತಿಳಿಸಿದರು. ರಾಜಸ್ಥಾನದಲ್ಲಿ ಈಗಾಗಲೆ ಇದೇ ಮಾದರಿ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿಂದೆ 10 ಇಲಾಖೆಗಳ ಕೆಲ ಸೇವೆಗಳನ್ನು ಜನರಿಗೆ ನೀಡಲಾಗುತ್ತಿತ್ತು. ಇದೀಗ 50 ಇಲಾಖೆಗಳು ಆನ್ ಬೋರ್ಡ್ ಆಗಿದ್ದು 167 ಸೇವೆಗಳನ್ನು ನಾಗರಿಕರಿಗೆ ಲಭ್ಯಗೊಳಿಸಲಾಗಿದೆ. ಮಾಹಿತಿ ಖಾಸಗಿತನ ಕಾಪಾಡುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿದೆ ಎಂದು ರಾಜೀವ್ ಚಾವ್ಲಾ ತಿಳಿಸಿದರು. ಕೆಲವೇ ತಿಂಗಳಲ್ಲಿ ಮೊಬೈಲ್ ಆಪ್ನಲ್ಲೂ ವೈಯಕ್ತಿಕ ಮಾಹಿತಿ ಗಮನಿಸಲು ಅವಕಾಶ ಮಾಡಿಕೊಡಲಾಗುತ್ತದೆ. ವಿವಿಧ ಇಲಾಖೆಗಳು ಡಿಜಿಟಲೀಕರಣ ವ್ಯವಸ್ಥೆ ಇಲ್ಲ ಅಥವಾ ದಾಖಲೆ ಸಂಗ್ರಹ ಪದ್ಧತಿ ಇಲ್ಲ. ಅಂತ ಕಡೆ ನೋಡಲ್ ಅಧಿಕಾರಿ ನೇಮಿಸಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲಾಖೆಯಲ್ಲಿ ಮಾಹಿತಿ ದಾಖಲೀಕರಣವಾಗುತ್ತಿದ್ದಂತೆ ಈ ಪೋರ್ಟಲ್ನಲ್ಲೂ ಲೈವ್ ಮಾಹಿತಿ ಸಿಗಲಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿ ಸಂಖ್ಯೆ: 080-22258338, ಇ-ಮೇಲ್ mk.helplinekarnataka.gov.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಆರ್ಟಿಐ ಅರ್ಜಿ ಒತ್ತಡ ಕಡಿಮೆ: ಪ್ರಸ್ತುತ ದಿನವೊಂದಕ್ಕೆ ಐದು ಸಾವಿರಕ್ಕಿಂತ ಹೆಚ್ಚು ಆರ್ಟಿಐ ಅರ್ಜಿಗಳು ಸರ್ಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಕೆಯಾಗುತ್ತಿದೆ. ಈ ರೀತಿ ಸಾಮಾನ್ಯ ಮಾಹಿತಿ ಜನರಿಗೆ ಸಿಗುವಂತೆ ಮಾಡುತ್ತಿರುವುದರಿಂದ ಅರ್ಜಿ ಸಲ್ಲಿಕೆ ಸಂಖ್ಯೆ ಶೇ.30-40 ಕಡಿಮೆಯಾಗಬಹುದು ಎಂದು ಮಾಹಿತಿ ಕಣಜ ಯೋಜನಾ ನಿರ್ದೇಶಕ ಶ್ರೇಯಸ್ ವಿವರಿಸಿದರು.
ಆರ್ಟಿಐನಡಿ ಸಿಗಲಿದೆ ತನಿಖಾ ವರದಿ: ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪೊಲೀಸರ ತನಿಖಾ ವರದಿ ಪಡೆಯಲು ಅವಕಾಶವಿದೆ ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಕರಣವೊಂದರ ತನಿಖಾ ವರದಿಯ ಪ್ರತಿ ಒದಗಿಸಲು ರಾಜ್ಯ ಮಾಹಿತಿ ಹಕ್ಕು ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ರಜಾಕಾಲದ ಪೀಠ ಈ ಆದೇಶ ಮಾಡಿದೆ. ಯಾವುದೇ ಪ್ರಕರಣ ತನಿಖಾ ಹಂತದಲ್ಲಿದ್ದಾಗ ತನಿಖೆ ಸಂಬಂಧ ಮಾಹಿತಿ ಒದಗಿಸಲು ನಿರ್ಬಂಧವಿದೆ. ಆದರೆ, ತನಿಖೆ ಪೂರ್ಣಗೊಂಡ ನಂತರ ವರದಿಯ ಪ್ರತಿಯನ್ನು ಆರ್ಟಿಐ ಅಡಿ ನೀಡಬಹುದು ಎಂದು ಅಭಿಪ್ರಾಯಪಟ್ಟಿರುವ ಪೀಠ ಅರ್ಜಿ ವಜಾಗೊಳಿಸಿದೆ.