ಅರ್‌ಟಿಐ ಕಾಯ್ದೆ ವಸತಿ ಶಾಲೆಗಳಿಗೂ ಅನ್ವಯ:  ಹೈಕೋರ್ಟ್ ಆದೇಶ

highcourt
Published on

ಬೆಂಗಳೂರು: ವಸತಿ ಶಾಲೆಗಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಅರ್‌ಟಿಐ) 2009ರ ಅಂಶಗಳು ಅನ್ವಯವಾಗುತ್ತವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸರ್ಕಾರದ ಯಾವುದೇ ಅನುದಾನವಿಲ್ಲದೆ ಐಸಿಎಸ್‌ಇ ಶಾಲೆ ನಡೆಸುತ್ತಿರುವ ಮೈಸೂರಿನ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.

ಆರ್‌ಟಿಇ ಕಾಯ್ದೆಯಲ್ಲಿನ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು 2021ರ ನ.23ರಂದು 1.61 ಕೋಟಿ ರೂ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅಲ್ಲದೆ, ಆರ್‌ಟಿಇ ಕಾಯ್ದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯ್ದೆಯ ನಿಯಮ 11ರಂತೆ, ನಮೂನೆ-1ರಂತೆ ಸರ್ಕಾರ ಹೊರತುಪಡಿಸಿ ಇತರೆ ಎಲ್ಲ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಆರ್‌ಟಿಇ ಕಾಯ್ದೆಯ ಸೆಕ್ಷನ್ 18(1) ಅನ್ನು ಉಲ್ಲೇಖಿಸಿ, ಕಾಯ್ದೆಯ ಗೆಜೆಟ್ 2012ರ ಏ.28ರಂದು ಆಗಿದೆ. ಆದಾದ ನಂತರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು. ಆದರೆ ಪಡೆದಿಲ್ಲ, ಆ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ. ಅರ್ಜಿದಾರರಿಗೆ ಕಾಯ್ದೆಯ ಬಗ್ಗೆ ಅನಗತ್ಯವಾಗಿ ವಿಳಂಬ ಮಾಡಿದ್ದಾರೆ. ಹಾಗಾಗಿ ಇಲಾಖೆ ದಂಡ ವಿಧಿಸಿ ಕೈಗೊಂಡಿರುವ ಕ್ರಮ ಸರಿಯಾಗಿದೆಯೇ ಇದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವೇನು?

ಡಿ. ಬಾಲಕೃಷ್ಣಪ್ಪ ಮತ್ತು ವಿಲಿಯಂ ಯೇಸುದಾಸ್ ಎನ್ನುವವರು ಶಾಲೆ ಆರ್‌ಟಿಇ ಅಡಿ ಮಾನ್ಯತೆಯನ್ನು ಪಡೆದಿಲ್ಲ. ಹಾಗಾಗಿ ಅದರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೋರಿದ್ದರು. ಅಧಿಕಾರಿಗಳು ಮೊದಲಿಗೆ 2016ರ ಡಿ.19ಕ್ಕೆ ಹಾಜರಾಗುವಂತೆ ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಹಾಜರಾಗಲಿಲ್ಲ. ನಂತರ 2017ರ ಜ.12ಕ್ಕೆ ಶಿಕ್ಷಣ ಇಲಾಖೆ ಮತ್ತೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

ಅದಕ್ಕೆ ಉತ್ತರಿಸಿದ್ದ ಶಾಲೆ ತಮ್ಮದು ವಸತಿ ಶಾಲೆ, ಅದು ಆರ್‌ಟಿಇ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಕ್ಷೇಪ ಎತ್ತಿದ್ದರು. ಬಳಿಕ ಬಿಇಒ, 2017ರಲ್ಲಿ ಮತ್ತೊಂದು ನೋಟಿಸ್ ಜಾರಿಗೊಳಿಸಿ, ಡಿಡಿಪಿಐ ಆದೇಶದಂತೆ ಆರ್‌ಟಿಇ ಕಾಯ್ದೆಯಡಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ್ದರು. ನಂತರ ಜಿಲ್ಲಾ ಪಂಚಾಯಿತಿ ಸಿಇಒ, ಡಿಡಿಪಿಐಗೆ ಆರ್‌ಟಿಇ ಕಾಯ್ದೆ ಸೆಕ್ಷನ್ 18 ಪಾಲನೆ ಮಾಡದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದರು.

ಆ ನಂತರವೂ ಷೋಕಾಸ್ ನೀಡಿ, ನಿಯಮ ಉಲ್ಲಂಸಿರುವುದಕ್ಕೆ ನಿಮಗೆ ದಂಡ ವಿಧಿಸಬಾರದೇಕೆ ಎಂದು ಕೇಳಿದ್ದರು. ಶಾಲೆಯ ಅಧಿಕೃತ ಪ್ರತಿನಿಧಿಯೊಬ್ಬರು ಡಿ.ಡಿ.ಪಿ.ಐ ಮುಂದೆ ಹಾಜರಾಗಿದ್ದರು. ಆನಂತರ ಡಿಡಿಪಿಐ ದಂಡ ವಿಧಿಸಿದ್ದರು. ಅದನ್ನು ಪ್ರಶ್ನಿಸಿ ಶಾಲೆಯ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net