ಬಾಲಕಿ ಒಬ್ಬಳೇ ಇರುವುದನ್ನು ನೋಡಿ ಮನೆಯೊಳಗೆ ನುಗ್ಗಿದ ಪೊಲೀಸ್​ ಕಾನ್ಸ್​ಟೇಬಲ್​ಗೆ ಕಾದಿತ್ತು ಶಾಕ್​!​

Constable Girl
Published on

ಹೈದರಾಬಾದ್​: ಜನರ ರಕ್ಷಣೆಗೆ ನಿಲ್ಲಬೇಕಾದ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬ ಅಪ್ರಾಪ್ತ ಬಾಲಕಿಯ ಜತೆ ಅಸಭ್ಯವಾಗಿ ವರ್ತಿಸಿರುವ ಆತಂಕಕಾರಿ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಪುರಸಭೆಯಲ್ಲಿ ನಡೆದಿದೆ.

ಶೇಖರ್​ (35) ಆರೋಪಿ ಪೊಲೀಸ್​ ಕಾನ್ಸ್​ಟೇಬಲ್​. ಈತ ಶಂಕರಪಲ್ಲಿ ಪುರಸಭೆಯ ನಿವಾಸಿ. ಹೈದರಾಬಾದ್​ನ ಕುಕಟಪಲ್ಲಿಯ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಕಾನ್ಸ್​ಟೇಬಲ್​ ಮನೆಯಲ್ಲಿ ಕುಟುಂಬವೊಂದು ಕೆಲ ವರ್ಷಗಳಿಂದ ಬಾಡಿಗೆಗೆ ವಾಸವಿದೆ. ಬುಧವಾರ ಸಂತ್ರಸ್ತ ಬಾಲಕಿಯೊಬ್ಬಳೇ ಮನೆಯಲ್ಲಿದ್ದಳು. ಆಕೆಯ ಪಾಲಕರು ಕೆಲಸ ನಿಮಿತ್ತ ಹೊರಡೆ ಹೋಗಿದ್ದರು. ಇದನ್ನು ಗಮನಿಸಿದ್ದ ಪೇದೆ ತನ್ನ ಕರಾಳ ಮುಖವನ್ನು ತೋರಿಸಿದ್ದಾನೆ.

ಯಾರು ಇಲ್ಲದಿರುವುದನ್ನು ನೋಡಿ ಮನೆಯೊಳಗೆ ದಿಢೀರ್​ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಜೋರಾಗಿ ಕೂಗಿಕೊಂಡಿದ್ದಾಳೆ. ಅದನ್ನು ಕೇಳಿ ಓಡಿಬಂದ ಸ್ಥಳೀಯರು ಪೇದೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾಲಕರ ದೂರಿನ ಅನ್ವಯ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಎಸ್​ಸಿ-ಎಸ್​ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ.

ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಪೇದೆ ಶೇಖರ್​ ಸ್ಥಳೀಯ ಉದ್ಯಮಿಗಳಿಗೂ ಕಿರುಕುಳ ನೀಡುತ್ತಿದ್ದ ಎಂಬ ವಿಚಾರವೂ ಕೂಡ ಇದೇ ಸಂದರ್ಭದಲ್ಲಿ ಬಯಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net