ಆರ್‌ಟಿಇ ದಾಖಲಾತಿ ಸೀಟುಗಳ ಸಂಖ್ಯೆಯೂ ಇಳಿಮುಖ, ಪಾಲಕರ ನೀರಸ ಪ್ರತಿಕ್ರಿಯೆ

ddpi
Published on

ಚಿಕ್ಕಬಳ್ಳಾಪುರ: ಪ್ರಸಕ್ತ ಸಾಲಿನಲ್ಲೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಗಿ ಕ್ರಮಗಳ ನಡುವೆ ಜಿಲ್ಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ದಾಖಲಾತಿ ಸೀಟುಗಳ ಸಂಖ್ಯೆಯೂ ಇಳಿಮುಖವಾಗಿದೆ.

2024-25 ನೇ ಸಾಲಿನಲ್ಲಿ ಸೀಟುಗಳ ಸಂಖ್ಯೆ 139 ಕ್ಕೆ ಕುಸಿದಿದೆ. ಕಳೆದ 2023-24 ನೇ ಸಾಲಿನಲ್ಲಿ 159 ಇತ್ತು. ಇನ್ನೂ 2018-19 ನೇ ಸಾಲಿನಲ್ಲಿ ಬರೋಬ್ಬರಿ 2751 ಸೀಟುಗಳು ನಿಗದಿಯ ಜತೆಗೆ 3511 ಅರ್ಜಿಗಳು ಸಲ್ಲಿಕೆಯಾಗುವುದರೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಈಗ ವರ್ಷದಿಂದ ವರ್ಷಕ್ಕೆ ಪಾಲಕರಿಂದ ನೀರಸ ನಿಲುವು ವ್ಯಕ್ತವಾಗುತ್ತಿದೆ. ಅಲ್ಪ ಪ್ರಮಾಣದ ನಿಗದಿಯ ನಡುವೆಯೂ ಸಮರ್ಪಕವಾಗಿ ಸೀಟು ಭರ್ತಿಯಾಗುತ್ತಿಲ್ಲ.

*ಖಾಸಗೀ ಶಾಲೆಗಳಿಗಿಲ್ಲ ದಾಖಲಾತಿ

ಮೊದಲು ಪಾಲಕರು ಪ್ರಿ ನರ್ಸರಿ ಇಲ್ಲವೇ ಒಂದನೇ ತರಗತಿಗೆ ಆಯ್ಕೆಯ ಖಾಸಗೀ ಶಾಲೆಗಳಲ್ಲಿ ಕಾಯ್ದೆಯಡಿ ದಾಖಲಿಸಬಹುದಾಗಿತ್ತು. ಬಳಿಕ ಮಗುವಿನ ಪಾಲಕರ ವಾಸಸ್ಥಳದ 1 ಕಿ.ಮೀ ವ್ಯಾಪ್ತಿಯೊಳಗೆ ದಾಖಲಾತಿಗೆ ಅವಕಾಶ ಎಂಬ ನಿಯಮವನ್ನು ಸೇರಿಸಲಾಯಿತು. ಹಾಗೆಯೇ ವಾಸಸ್ಥಳದ ವ್ಯಾಪ್ತಿಯಲ್ಲಿ ಯಾವುದಾದರೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿದ್ದಲ್ಲಿ ಕಾಯ್ದೆಯಡಿ ಅರ್ಜಿ ಸಲ್ಲಿಸುವಂತಿರಲಿಲ್ಲ. ಇದೀಗ ದಾಖಲಾತಿ ಸೀಟು ಹಂಚಿಕೆಯನ್ನು ಅನುದಾನಿತ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದಕ್ಕೆ ಬದಲು ಪಾಲಕರು ಖಾಸಗೀ ಶಾಲೆಗಳಿಗೆ ಮೊರೆ ಹೋಗಲಿದ್ದು ಸರ್ಕಾರಿ ಶಾಲೆಯ ಸೀಟನ್ನೇ ನಿರಾಕರಿಸುವ ಸಂದರ್ಭದಲ್ಲಿ ಅನುದಾನಿತ ಶಾಲೆಗೆ ದಾಖಲಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಿದ್ದಾರೆ.

*ಬಡ ಮಕ್ಕಳಿಗೆ ಅನನುಕೂಲ

ಕೇಂದ್ರ ಸರ್ಕಾರ 2009ನೇ ಸಾಲಿನಲ್ಲಿ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಆರ್‌ಟಿಇ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯಡಿ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶೇ.25 ರಷ್ಟು ಸೀಟು ಮೀಸಲಿಟ್ಟು, ಬಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಅವಕಾಶ ನೀಡಲಾಗಿತ್ತು. ಇದರಡಿ ದಾಖಲಾಗುವ ಮಕ್ಕಳಿಗೆ ಉಚಿತ ಶಿಕ್ಷಣದ ವೆಚ್ಚವನ್ನು. ಸರ್ಕಾರವೇ ಭರಿಸುತ್ತಿತ್ತು. ಈಗ ಖಾಸಗೀ ಶಾಲೆಗಳಿಗೆ ಸೇರಿಸಲು ನಿಯಮಗಳ ಅಡ್ಡಿ ಹಿನ್ನೆಲೆಯಲ್ಲಿ ಈ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net