

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ) ಅಡಿ ಖಾಸಗಿ ಶಾಲೆಯಲ್ಲಿರುವ ಶೇ.25 ಸೀಟುಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಶಾಲಾ ಶಿಕ್ಷಣ ಇಲಾಖೆ ಮೇ 28ರವರೆಗೆ ವಿಸ್ತರಿಸಿದೆ.
ಬುಧವಾರ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಈ ಮೊದಲು ಅರ್ಜಿ ಸಲ್ಲಿಸಲು ಮೇ 14 ಕಡೇ ದಿನವಾಗಿತ್ತು ಮತ್ತು ಬುಧವಾರ ಮೊದಲ ಸುತ್ತಿನ ಸೀಟು ಹಂಚಿಕೆ ಲಾಟರಿ ಪ್ರಕ್ರಿಯೆ ನಡೆಯಬೇಕಿತ್ತು. ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಒಂದನೇ ತರಗತಿಗೆ ಆರ್ಟಿಇ ಅರ್ಜಿ ಸಲ್ಲಿಸಲು 5.5 ವರ್ಷ ವಯೋಮಿತಿ ತುಂಬಿರುವವರು ಅರ್ಜಿ ಸಲ್ಲಿಸಬಹುದು. ಇಲಾಖೆ ಅಧಿಕಾರಿಗಳು ಅರ್ಜಿ ಸಲ್ಲಿಕೆಯಾದ ದಿನವೇ ಪರಿಶೀಲಿಸಿ ಇತ್ಯರ್ಥಪಡಿಸುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಮೊದಲ ಸುತ್ತಿನ ಸೀಟು ಹಂಚಿಕೆ ಲಾಟರಿ ಪ್ರಕ್ರಿಯೆಯು ಮೇ 30ರಂದು ನಡೆಯಲಿದೆ. ಮೇ 31ರಿಂದ ಜೂನ್ 6ರವರೆಗೆ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.