ಗಲಭೆ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ನಿರ್ಮಿಸುವ ವಂಚಕರನ್ನು ಬಂಧಿಸಿ; ನಳಿನ್ ಕುಮಾರ್ ಕಟೀಲ್

Nalin Kumar Katil
Published on

ಹಾವೇರಿ: ರಟ್ಟೀಹಳ್ಳಿಯಲ್ಲಿ ಆರ್​ಎಸ್​ಎಸ್​ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿದೆ. ಇದು ಬಾರಿ ರಾಷ್ಟ್ರಭಕ್ತಿಯ ಬಗ್ಗೆ ಜಾಗೃತಿ ಮೂಡಿಸೋ ವ್ಯಕ್ತಿ ನಿರ್ಮಾಣದ ಶಿಬಿರ. ಅ.11 ರಾತ್ರಿ 5 ಜನ ಆರ್​ಎಸ್​ಎಸ್ ಕಾರ್ಯಕರ್ತರು ಪಥಸಂಚಲನದ ಮಾರ್ಗ ವೀಕ್ಷಣೆಗೆ ಹೋಗಿದ್ದರು. ಈ ವೇಳೆ ಅನ್ಯಕೋಮಿನ ಗೂಂಡಾಗಳು ಹಲ್ಲೆ ಮಾಡಿದ್ದರು. ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಸಹಿಸಲು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕಾರ್ಯಕರ್ತರ ಮೇಲೆ ವಿನಾಕಾರಣ ಅಡ್ಡಗಟ್ಟಿ ಹಲ್ಲೆ ಮಾಡಿರುವುದು ಮುಸ್ಲಿಂ ಮೂಲಭೂತವಾದದ ಮಾನಸಿಕತೆ ತೋರಿಸುತ್ತದೆ. ಇದು ಪಾಕಿಸ್ತಾನವಲ್ಲ. ಪಾಕಿಸ್ತಾನದಲ್ಲೂ ಸ್ವತಂತ್ರವಾಗಿ ಹೋಗಬಹುದು. ಯಾವ ಏರಿಯಾದಲ್ಲಿ ಎಷ್ಟು ಹೊತ್ತಿಗೆ ಹೋಗಬಹುದು ಎನ್ನುವುದು ಸಂವಿಧಾನದಲ್ಲಿ ಎಲ್ಲೂ ಉಲ್ಲೇಖವಿಲ್ಲ. ನಮ್ಮ ಸರಕಾರ ಈ ಘಟನೆ ಸಹಿಸುವುದಿಲ್ಲ ಎಂದು ಹೇಳಿದರು.

ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 21 ಜನರನ್ನು ಬಂಧಿಸಲಾಗಿದೆ. ಘಟನೆ ನಡೆದ ತಕ್ಷಣ ಸರಕಾರ ಸ್ಪಂದಿಸಿದೆ. ಸಿಎಂ ಮತ್ತು ಗೃಹ ಸಚಿವರು ಸ್ಪಂದಿಸಿದ್ದಾರೆ. ಹಲ್ಲೆಗೆ ಒಳಗಾದವರ ಜೊತೆ ಮಾತನಾಡಿ ಬಂದಿದ್ದೇನೆ. ಅವರ ಅಭಿಪ್ರಾಯದ ಪ್ರಕಾರ ಹಲ್ಲೆ ನಡೆಯುವ ವೇಳೆ 100ಕ್ಕೂ ಅಧಿಕ ಜನರಿದ್ದರಂತೆ. ಗಲಭೆ ಸೃಷ್ಟಿಸಿ ಅಶಾಂತಿ ನಿರ್ಮಾಣ ಮಾಡುವ ಶಾಂತಿ ವಂಚಕರನ್ನು ಬಂಧಿಸಲಾಗುವುದು ಎಂದು ಹೇಳಿದರು.

ಈ ವೇಳೆ ಬಿಜೆಪಿ ಸಂಕಲ್ಪ ಯಾತ್ರೆ ಸುಳ್ಳಿನ ಯಾತ್ರೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ಹುಟ್ಟೇ ಸುಳ್ಳು. ಅವರ ಜೀವನದಲ್ಲಿ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net