

ಶಿವಮೊಗ್ಗ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ಭಾನುವಾರ ಸ್ವಯಂಸೇವಕರು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದರು. ಶಿವಮೊಗ್ಗದಲ್ಲಿ ನಡೆದ ಪಥಸಂಚಲನದಲ್ಲಿಯೂ ನೂರಾರು ಸ್ವಯಂಸೇವಕರು ಪಾಲ್ಗೊಂಡಿದ್ದರು.
ಹೊಸನಗರ, ತೀರ್ಥಹಳ್ಳಿ ತಾಲೂಕಿನ ನೊಣಬೂರು, ಹೊಳೆಹೊನ್ನೂರು, ಭದ್ರಾವತಿ ಮುಂತಾದೆಡೆ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರು ಘೋಷ್‌ನೊಂದಿಗೆ ಸಾಗಿದರು. ಪಥಸಂಚಲನ ಮಾರ್ಗದ ಮನೆಗಳ ಎದುರು ಮಹಿಳೆಯರು ರಂಗೋಲಿ ಹಾಕಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ವೀಕ್ಷಣೆ ಮಾಡಿದರು.
ಶಿವಮೊಗ್ಗದಲ್ಲಿ ಭಾನುವಾರ ಬೆಳಗ್ಗೆ ಬಿ.ಎಚ್ ರಸ್ತೆಯ ಕರ್ನಾಟಕ ಸಂಘದ ಪಕ್ಕದಲ್ಲಿರುವ ತಾನಾಜಿ ಸಂಘಸ್ಥಾನದಿಂದ ಆರಂಭವಾದ ಪಥಸಂಚಲನ ಕೆ.ಆರ್.ಪುರಂ ರಸ್ತೆ, ಕ್ಲಾರ್ಕ್ ಪೇಟೆ, ಒ.ಟಿ.ರಸ್ತೆ, ಸೀಗೇಹಟ್ಟಿ, ಬಿ.ಬಿ. ರಸ್ತೆ ಮೂಲಕ ಬಿ.ಎಚ್. ರಸ್ತೆಯ ಮೈಲಾರೇಶ್ವರ ದೇವಾಲಯದ ಆವರಣದಲ್ಲಿ ಸಮಾಪ್ತಿಗೊಂಡಿತು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್, ಪಾಲಿಕೆ ಮಾಜಿ ಸದಸ್ಯ ಪ್ರಭಾಕರ್, ಜಿಲ್ಲಾ ಸಂಘ ಚಾಲಕ್ ಬಿ.ಎ.ರಂಗನಾಥ್, ನಗರ ಸಂಘ ಚಾಲಕ್ ಲೋಕೇಶ್ವರ್ ಕಾಳೆ, ಹಿರಿಯ ಸ್ವಯಂ ಸೇವಕರಾದ ಬ.ಮ.ಶ್ರೀಕಂಠಯ್ಯ ಮತ್ತಿತರರು ಪಾಲ್ಗೊಂಡಿದ್ದರು.