

Mohan Bhagwat : 75 ವರ್ಷ ದಾಟಿದ ನಂತರ ರಾಜಕೀಯ ನಾಯಕರು ನಿವೃತ್ತಿ ತೆಗೆದುಕೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಭಾಗವತ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.
ಪ್ರಶಸ್ತಿಗಳನ್ನು ಅರಸುವ ಬಡ ಪ್ರಧಾನಿ! ವಾವ್ ಎಂಥಾ ಮರಳುವಿಕೆ. ವಿದೇಶಿ ಪ್ರವಾಸದಿಂದ ಮೋದಿ ಹಿಂದಿರುಗಿದಾಗ, ಸರಸಂಘಚಾಲಕ ಭಾಗವತ್ ಅವರು 2025, ಸೆಪ್ಟೆಂಬರ್ 17ರಂದು ಮೋದಿಗೆ 75 ವರ್ಷ ತುಂಬುತ್ತದೆ ಎಂದು ನೆನಪಿಸಿದ್ದಾರೆ. ಆದರೆ, ಪ್ರಧಾನ ಮಂತ್ರಿಗಳು ಮೋಹನ್ ಭಾಗವತ್ಗೂ ಇದನ್ನು ಹೇಳಬಹುದು. ಏಕೆಂದರೆ, ಅವರಿಗೂ 2025, ಸೆಪ್ಟೆಂಬರ್ 11ರಂದು 75 ವರ್ಷ ತುಂಬುತ್ತದೆ! ಒಂದು ಬಾಣ, ಎರಡು ಗುರಿಗಳು! ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಭಾಗವತ್ ಅವರ ಹೇಳಿಕೆಯನ್ನು ಅನುಸರಿಸಿ ಜೈರಾಮ್ ರಮೇಶ್ ನೀಡಿದ ಹೇಳಿಕೆಯನ್ನು ಅವರ ಸಹೋದ್ಯೋಗಿ ಪವನ್ ಖೇರಾ ಕೂಡ ಪುನರುಚ್ಛರಿಸಿದ್ದಾರೆ. ಈಗ ನೀವಿಬ್ಬರೂ ಬ್ಯಾಗ್ ಎತ್ತಿಕೊಂಡು ಒಬ್ಬರಿಗೊಬ್ಬರು ಮಾರ್ಗದರ್ಶನ ಮಾಡಿಕೊಳ್ಳಿ ಎಂದು ಮೋದಿ ಹಾಗೂ ಭಾಗವತ್ರನ್ನು ಟೀಕಿಸಿ, ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, ಬುಧವಾರ (ಜುಲೈ 09) ನಾಗ್ಪುರದಲ್ಲಿ ದಿವಂಗತ ಆರ್ಎಸ್ಎಸ್ ಸಿದ್ಧಾಂತವಾದಿ ಮೊರೊಪಂತ್ ಪಿಂಗ್ಲೆ ಅವರಿಗೆ ಸಮರ್ಪಿತವಾದ "ಮೊರೊಪಂತ್ ಪಿಂಗ್ಲೆ: ದಿ ಆರ್ಕಿಟೆಕ್ಟ್ ಆಫ್ ಹಿಂದೂ ರಿಸರ್ಜೆನ್ಸ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದರು. 75 ವರ್ಷದ ಶಾಲನ್ನು ಒಬ್ಬ ವ್ಯಕ್ತಿಯ ಮೇಲೆ ಹೊದಿಸಿದರೆ, ಅದರರ್ಥ ಅವರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದಾರೆ ಮತ್ತು ಅವರು ಪಕ್ಕಕ್ಕೆ ಸರಿದು ಇತರರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಪಿಂಗ್ಲೆ ಅವರು ಈ ಹಿಂದೆ ಹೇಳಿದ್ದನ್ನು ಆರ್ಎಸ್ಎಸ್ ಮುಖ್ಯಸ್ಥರು ಉಲ್ಲೇಖಿಸಿದರು. ಇದೇ ಹೇಳಿಕೆಯನ್ನು ಉಲ್ಲೇಖಿಸಿ ಜೈರಾಮ್ ರಮೇಶ್ ಪ್ರಧಾನಿ ಮೋದಿಯನ್ನು ಟೀಕಿಸಿದರು.
ಸದ್ಯ ಮೋಹನ್ ಭಾಗವತ್ ಅವರ ಹೇಳಿಕೆ ದೇಶ್ಯಾದ್ಯಂತ ನಾನಾ ತರಹದ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಕುರಿತಾಗಿ ಕಾಂಗ್ರೆಸ್ ಪಕ್ಷ ವ್ಯಂಗ್ಯವಾಡಿದ್ದು. ಪ್ರಧಾನಿ ಮೋದಿ ಮತ್ತು ಭಾಗವತ್ ಇಬ್ಬರೂ ಸೆಪ್ಟೆಂಬರ್ನಲ್ಲಿ 75 ವರ್ಷಗಳನ್ನು ಪೂರೈಸಲಿದ್ದಾರೆ, ಅವರ ಜನ್ಮದಿನಗಳ ಅಂತರ ಆರು ದಿನಗಳು ಎಂದು ಕುಹಕವಾಡಿದೆ. (ಏಜೆನ್ಸೀಸ್)