ಸಬಲರಾಗದಿದ್ದರೆ ಒಡೆಯುವ ಶಕ್ತಿಗಳು ಬಲಶಾಲಿಯಾಗಲಿವೆ; ಆರ್‌ಎಸ್‌ಎಸ್ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಎಚ್ಚರಿಕೆ

Bhagavat hoists flag
Published on

ಬೆಂಗಳೂರು: ವಿಶ್ವಕ್ಕೆ ಪ್ರಕಾಶ ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ. ಇಡೀ ವಿಶ್ವಕ್ಕೆ ಭಾರತದ ಅಗತ್ಯವಿದೆ. ಹಾಗೆಯೇ ನಾವು ಸಬಲರಾಗದಿದ್ದರೆ ನಮ್ಮನ್ನು ಒಡೆಯುವ ಶಕ್ತಿಗಳು ಬಲಶಾಲಿಯಾಗುತ್ತವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಎಚ್ಚರಿಸಿದರು.

ಬೆಂಗಳೂರಿನ ಬಸವನಗುಡಿಯ ವಾಸವಿ ಕನ್ವೆನ್ಷನ್ ಹಾಲ್‌ನಲ್ಲಿ ಸ್ವಾತಂತ್ರ್ಯ ದಿನದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಂಗಳವಾರ ಮಾತನಾಡಿದ ಅವರು ನಮಗೆ ಸ್ವಾಧೀನತೆ ಸಿಕ್ಕಿದೆ, ಸ್ವಾತಂತ್ರ್ಯ ಸಿಕ್ಕಿಲ್ಲ. ನಮ್ಮ ಅಸ್ಮಿತೆಯ ಆಧಾರದಲ್ಲಿ ದೇಶವನ್ನು ಕಟ್ಟುವ ಅಗತ್ಯವಿದೆ ಎಂದು ಜ್ಞಾನ, ಕರ್ಮದ ಆಧಾರದಲ್ಲಿ ಕೆಲಸ ಮಾಡಿದರೆ ಸ್ವತಂತ್ರ ಸಿಗುತ್ತದೆ ಎಂಬ ಸಲಹೆ ನೀಡಿದರು.

ಜನರಷ್ಟೇ ಅಲ್ಲ, ಜಾನುವಾರು, ಜಲ, ಅರಣ್ಯ ಪ್ರತಿಯೊಂದರ ಹಿತದ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕಾಗಿದೆ. ಸ್ವಾತಂತ್ರ್ಯ ದಿನದ ನಿಮಿತ್ತ ಧ್ವಜಾರೋಹಣ, ಭಾರತಮಾತೆಗೆ ಪೂಜೆ, ಸೂರ್ಯ ನಮಸ್ಕಾರ ಮಾಡಿದ್ದೇವೆ. ಪ್ರಕಾಶದ ಪೂಜೆ ಮಾಡಿದ್ದೇವೆ, ಇದೇ ಭಾರತ. ಸ್ವಾತಂತ್ರ್ಯ ದಿನದಂದು ಸೂರ್ಯ ನಮಸ್ಕಾರ ಅತ್ಯಂತ ಸೂಕ್ತವಾಗಿದೆ ಎಂದರು.

ಧ್ವಜದ ಸ್ವರೂಪದ ಬಗ್ಗೆ ಯೋಚಿಸುವುದೂ ಮುಖ್ಯವಾಗಿದೆ. ನಿರಂತರ ಕ್ರಿಯಾಶೀಲವಾಗಿರಬೇಕು ಎನ್ನುವುದನ್ನು ಕೇಸರಿ ಬಣ್ಣ ಸೂಚಿಸುತ್ತದೆ. ಸ್ವಾರ್ಥಕ್ಕಾಗಿ ತ್ಯಾಗ ಮಾಡುವುದಲ್ಲ. ಮನದ ವಿಕಾರ ನಿರ್ಮೂಲಗೊಳಿಸಲು ಬಿಳಿ ಬಣ್ಣವಿದೆ. ಹಸಿರು ಬಣ್ಣ ಸಮೃದ್ಧಿಯನ್ನು ಸೂಚಿಸುತ್ತದೆ. ತ್ರಿವರ್ಣ ಧ್ವಜವು ಈ ಸಂದೇಶ ನೀಡುತ್ತದೆ ಎಂದು ಡಾ.ಮೋಹನ್ ಭಾಗವತ್ ವಿಶ್ಲೇಷಿಸಿದರು. ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net