

ಕುಂಬಳೆ: ಕೇರಳದ ಐದು ದೇವಸ್ವಂ ಬೋರ್ಡ್ಗಳಲ್ಲಿ ಒಂದಾಗಿ ರುವ ತಿರುವಾಂಕೂರು ದೇವಸ್ವಂ ಬೋರ್ಡ್(ಟಿಡಿಬಿ) ತನ್ನ ಅಧೀನದ 1,240 ದೇವಸ್ಥಾನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ದೇವಾಲಯದ ಆವರಣದಲ್ಲಿ ಆರ್ಎಸ್ಎಸ್ ಶಾಖೆ, ಶಾರೀರಿಕ್ ಅಥವಾ ಪಥ ಸಂಚಲನ ನಡೆಸುವಂತಿಲ್ಲ. ನಿಷೇಧ ಉಲ್ಲಂಘಿಸಿ ಯಾವುದೇ ದೇವಾಲಯದಲ್ಲಿ ಆರ್ಎಸ್ಎಸ್ ಚಟುವಟಿಕೆ ನಡೆಯುತ್ತಿದ್ದರೆ, ಅದನ್ನು ತಕ್ಷಣ ತಡೆಯಲು ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ನೌಕರರು ವಿಫಲವಾದರೆ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಟಿಡಿಬಿ ಎಚ್ಚರಿಕೆ ನೀಡಿದೆ.
ಕೇರಳದ ಹಲವು ದೇವಸ್ಥಾನಗಳ ಆವರಣದಲ್ಲಿ ಆರ್ಎಸ್ಎಸ್ ಶಾಖೆಗಳು, ಕಾರ್ಯಕ್ರಮಗಳು ನಡೆಯುತ್ತಿದ್ದು, ದೇವಸ್ಥಾನಗಳ ಸಿಬ್ಬಂದಿ ಇದನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಟಿಡಿಬಿ ಈ ಆದೇಶ ಹೊರಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಬಿಡಿ ಅಧ್ಯಕ್ಷ ಎನ್.ವಾಸು, ರಾಜಕೀಯ ಉದ್ದೇಶಗಳಿಗೆ ದೇವಸ್ಥಾನದ ಜಾಗ ಬಳಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ವರ್ಷದ ಹಿಂದೆಯೇ ಕೈಗೊಂಡಿರುವ ನಿರ್ಧಾರ ಇದಾಗಿದೆ. ಇದರಲ್ಲಿ ಹೊಸತೇನಿಲ್ಲ. ಜನವರಿಯಲ್ಲಿ ಬಂದ ದೂರೊಂದನ್ನು ಆಧರಿಸಿ ದೇವಸ್ವಂ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಆರ್ಎಸ್ಎಸ್ ಮಾತ್ರವಲ್ಲ, ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳಿಗೆ ದೇವಳಗಳ ಆವರಣ ಬಳಕೆಗೆ ಅವಕಾಶವಿಲ್ಲ. ನಿರ್ದಿಷ್ಟ ದೂರಿನ ಹಿನ್ನೆಲೆಯಲ್ಲಿ ಮಾತ್ರ ಆರ್ಎಸ್ಎಸ್ ಹೆಸರು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ. ಕೇರಳದ ಐದು ದೇವಸ್ವಂ ಬೋರ್ಡಗಳ ಅಡಿಯಲ್ಲಿ ಸುಮಾರು 3 ಸಾವಿರ ದೇವಸ್ಥಾನಗಳಿವೆ.