

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಸಮನ್ವಯ ಸಭೆ ಸೆಪ್ಟೆಂಬರ್ 14ರಿಂದ 16ರ ವರೆಗೆ ಮೂರು ದಿನ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಎಲ್ಲ ಐವರೂ ಸಹ ಸರಕಾರ್ಯವಾಹರು ಉಪಸ್ಥಿತರಿರುತ್ತಾರೆ.
ಈ ಸಭೆಯಲ್ಲಿ ಭಾಗವಹಿಸುವ ಎಲ್ಲ ಸಂಘಟನೆಗಳು ಸಾಮಾಜಿಕ ಜೀವನದ ವಿವಿಧ ಅಂಶಗಳ ಕುರಿತು ತಮ್ಮ ಅನುಭವ ಮತ್ತು ಕೆಲಸದ ಬಗ್ಗೆ ವಿವರವಾಗಿ ಚರ್ಚಿಸಲಿವೆ. ಪ್ರಸ್ತುತ ರಾಷ್ಟ್ರೀಯ ಸನ್ನಿವೇಶದ ಜತೆಗೆ ಸಾಮಾಜಿಕ ಸಾಮರಸ್ಯ, ಪರಿಸರ, ಕುಟುಂಬ ಪ್ರಬೋಧನಾ, ಸೇವಾ ಕಾರ್ಯ, ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗುತ್ತದೆ. ಸಾಮಾಜಿಕ ಪರಿವರ್ತನೆಯ ವಿವಿಧ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಿರುವ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ.
ಸಂಘಪ್ರೇರಿತ 36 ವಿವಿಧ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಜನತಾ ಪಾರ್ಟಿ, ಭಾರತೀಯ ಕಿಸಾನ್ ಸಂಘ, ವಿದ್ಯಾ ಭಾರತಿ, ಭಾರತೀಯ ಮಜ್ದೂರ್ ಸಂಘ, ಸಂಸ್ಕಾರ ಭಾರತಿ, ಸೇವಾ ಭಾರತಿ, ಸಂಸ್ಕೃತ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ರಾಷ್ಟ್ರ ಸೇವಿಕಾ ಸಮಿತಿ, ವನವಾಸಿ ಕಲ್ಯಾಣ ಆಶ್ರಮ ಸೇರಿದಂತೆ ಇತರ ಪ್ರಮುಖ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಲಿವೆ. ಈ ಸಂಘಟನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪದಾಧಿಕಾರಿಗಳು ಸೇವೆ, ಸಮರ್ಪಣೆ ಮತ್ತು ದೇಶಭಕ್ತಿಯೊಂದಿಗೆ ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿತ್ತಾರೆ. ಕಳೆದ ವರ್ಷ ಈ ಸಭೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದಿತ್ತು ಎಂದು ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್ ಆಂಬೇಕರ್ ತಿಳಿಸಿದ್ದಾರೆ.