

ಬೆಂಗಳೂರು: ಕರೊನಾ ವೈರಸ್ ದೇಶ ಮತ್ತು ರಾಜ್ಯದಲ್ಲಿ ಹರಡಿರುವ ಹಿನ್ನೆಲೆ ಇಂದಿನಿಂದ ಒಂದು ವಾರದ ಕಾಲ ಸಬೆ ಸಮಾರಂಭ, ಮದುವೆ, ಬರ್ತ್ಡೇ ಪಾರ್ಟಿಗಳಿಗೆ ಸರ್ಕಾರ ಬ್ರೇಕ್ ಹಾಕಿದೆ. ಇದರ ಬಿಸಿ ಆರೆಸ್ಸೆಸ್ಗೂ ತಟ್ಟಿದ್ದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರೆಸ್ಸೆಸ್ನ ಪ್ರತಿನಿಧಿ ಸಭೆಯನ್ನು ರದ್ದು ಮಾಡಲಾಗಿದೆ.
ಮಾ.15ರಿಂದ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಮೂರು ದಿನಗಳ ಕಾಲದ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ನಡೆಸುವುದಾಗಿ ತಿಳಿಸಲಾಗಿತ್ತು. ದೇಶಾದ್ಯಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ 15 ಲಕ್ಷ ಉದ್ಯೋಗಿ ಕಾರ್ಯಕರ್ತರನ್ನು ಸಮಾಜದ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಸೇವಾ ಕಾರ್ಯಗಳಲ್ಲಿ ನಿಯೋಜನೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಪ್ರತಿನಿಧಿ ಸಭೆಯನ್ನು ನಡೆಸಲು ಸಕಲ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕರೊನಾ ವೈರಸ್ ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಿರುವ ಹಿನ್ನೆಲೆ ಪ್ರತಿನಿಧಿ ಸಭೆಯನ್ನು ರದ್ದು ಮಾಡಲಾಗಿದೆ.
ಈ ವಿಚಾರವಾಗಿ ಆರೆಸ್ಸೆಸ್ನ ಸುರೇಶ್ ಭೈಯಾಜಿ ಜೋಶಿ ಅವರು ಮಾಹಿತಿ ನೀಡಿದ್ದು, "ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡಿರುವ ಸೂಚನೆಯ ಮೇರೆಗೆ 2020ರ ಮಾರ್ಚ್ 15ರಿಂದ 17ರವರೆಗೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರೆಸ್ಸೆಸ್ನ ಅಖಿಲ ಭಾರತೀಯ ಪ್ರತಿನಿಧಿ ಸಭೆ ರದ್ದುಗೊಂಡಿದೆ" ಎಂದು ತಿಳಿಸಿದ್ದಾರೆ.
ಸಂಘಟನೆಯ ಪ್ರತಿನಿಧಿ ಸಭೆಯಲ್ಲಿ ಆರೆಸ್ಸೆಸ್ನ 44 ಸಂಘಟನಾತ್ಮಕ ರಾಜ್ಯಗಳು, 11 ವಲಯಗಳ ಪ್ರಮುಖ ಪದಾಧಿಕಾರಿಗಳು, ಅಖಿಲ ಭಾರತೀಯ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ವಿಹಿಂಪ, ಎಬಿವಿಪಿ, ಬಿಜೆಪಿ, ವಿದ್ಯಾ ಭಾರತಿಯಂತಹ ಆರೆಸ್ಸೆಸ್ ಪ್ರೇರಿತ 35 ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಸೇರಿ 1,500 ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ ಎಂದು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಆರೆಸ್ಸೆಸ್ ಅಖಿಲ ಭಾರತೀಯ ಪ್ರಚಾರ ವಿಭಾಗದ ಪ್ರಮುಖ ಅರುಣ್ಕುಮಾರ್ ತಿಳಿಸಿದ್ದರು.
ದೇಶದಲ್ಲಿ ಕರೊನಾ ವೈರಸ್ ಭೀತಿ ಹೆಚ್ಚಾಗಿದ್ದು ಅದರ ತಡೆಗಟ್ಟುವಿಕೆಗೆ ಅನೇಕ ಮುನ್ನೆಚ್ಚರಿಕಾ ಕ್ರಮಗಳಬನ್ನು ತೆಗೆದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಆರು ಜನರಲ್ಲಿ ವೈರಸ್ ಇರುವುದು ಧೃಡವಾಗಿದ್ದು, ಆರನೇ ತರಗತಿವರೆಗಿನ ಎಲ್ಲಾ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಸಿನಿಮಾ ಥಿಯೇಟರ್ಗಳು, ಮಾಲ್ಗಳು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳನ್ನು ಒಂದು ವಾರದ ಕಾಲ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. (ಏಜೆನ್ಸೀಸ್)