

ಬೆಂಗಳೂರು: ದೇಶಾದ್ಯಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ 15 ಲಕ್ಷ ಉದ್ಯೋಗಿ ಕಾರ್ಯಕರ್ತರನ್ನು ಸಮಾಜದ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಸೇವಾ ಕಾರ್ಯಗಳಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ಆರೆಸ್ಸೆಸ್ ಅಖಿಲ ಭಾರತೀಯ ಪ್ರಚಾರ ವಿಭಾಗದ ಪ್ರಮುಖ ಅರುಣ್ಕುಮಾರ್ ತಿಳಿಸಿದ್ದಾರೆ.
ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಮಾ.15ರಿಂದ 3 ದಿನ ನಡೆಯಲಿರುವ, ಆರೆಸ್ಸೆಸ್ನ ಅತ್ಯುನ್ನತ ನೀತಿ ನಿರ್ಧಾರಕ ವಾರ್ಷಿಕ ಸಭೆ ‘ಅಖಿಲ ಭಾರತೀಯ ಪ್ರತಿನಿಧಿ ಸಭೆಯ (ಎಬಿಪಿಎಸ್)’ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರಮುಖವಾಗಿ 18-30 ವರ್ಷದವರನ್ನು ಗಮನದಲ್ಲಿರಿಸಿ ಕೊಂಡು ಒಂದು ತಿಂಗಳು ಸಮೀಕ್ಷೆ ನಡೆಸಲಾಗಿದೆ. ಆರೆಸ್ಸೆಸ್ ಕಾರ್ಯದಲ್ಲಿ ತೊಡಗಿಸಿಕೊಂಡು, ತಂತಮ್ಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಲಕ್ಷ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೌಟುಂಬಿಕ ಪರಿಸ್ಥಿತಿ, ಸಮಾಜಕ್ಕೆ ನೀಡಬಹುದಾದ ಸಮಯ, ಆಸಕ್ತಿಯ ಸೇವಾ ಕ್ಷೇತ್ರ, ಸಾಮರ್ಥ್ಯವನ್ನು ಸಮೀಕ್ಷೆಯಲ್ಲಿ ದಾಖಲಿಸಲಾಗಿದೆ. ಸಮಾಜದಲ್ಲಿ ಅತ್ಯಂತ ಅಗತ್ಯವಾಗಿ ಬೇಕಿರುವ ಸೇವಾ ಕಾರ್ಯಗಳನ್ನೂ ಸಮೀಕ್ಷೆ ನಡೆಸಲಾಗಿದೆ. ಕೊಳಚೆ ಪ್ರದೇಶಗಳಲ್ಲಿ ಸೇವೆ, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಗ್ರಾಮ ವಿಕಾಸ ಸೇರಿ ಅನೇಕ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಕಾರ್ಯಕರ್ತರ ಸಮಯ, ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದಾದರೂ ಒಂದು ಸೇವಾ ಕ್ಷೇತ್ರದಲ್ಲಿ ಅವರನ್ನು ಎರಡರಿಂದ ಮೂರು ವರ್ಷ ಒತ್ತು ನೀಡಿ ಕೆಲಸ ಮಾಡಲು ನಿಯೋಜಿಸಲಾಗುತ್ತದೆ. ಆ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರುವ ಗುರಿ ಹೊಂದಲಾಗಿದೆ. ಈ ಕುರಿತು ಎಬಿಪಿಎಸ್ನಲ್ಲಿ ವಿಸõತ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಸಹ ಪ್ರಚಾರ ಪ್ರಮುಖ್ ನರೇಂದ್ರ ಠಾಕೂರ್, ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
1,500 ಪ್ರತಿನಿಧಿಗಳು: ಆರೆಸ್ಸೆಸ್ನ 44 ಸಂಘಟನಾತ್ಮಕ ರಾಜ್ಯಗಳು, 11 ವಲಯಗಳ ಪ್ರಮುಖ ಪದಾಧಿಕಾರಿಗಳು, ಅಖಿಲ ಭಾರತೀಯ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಹಿಂಪ, ಎಬಿವಿಪಿ, ಬಿಜೆಪಿ, ವಿದ್ಯಾ ಭಾರತಿಯಂತಹ ಆರೆಸ್ಸೆಸ್ ಪ್ರೇರಿತ 35 ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಸೇರಿ 1,500 ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ.
ಸಿಎಎ ಕುರಿತು ನಿರ್ಣಯ ಸಾಧ್ಯತೆ: ದೇಶಾದ್ಯಂತ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಿಎಎ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಎಂದು ಅರುಣ್ ಕುಮಾರ್ ತಿಳಿಸಿದರು. 14ಕ್ಕೆ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ, ಮೂರು ದಿನಗಳ ಪ್ರಮುಖ ಸಭೆಗೆ ಅಜೆಂಡಾ ಸಿದ್ಧವಾಗಲಿದೆ. ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ ನಡೆಯುತ್ತದೆ, ನಿರ್ಣಯವೂ ಆಗಬಹುದು ಎಂದರು.
ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ: ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಪ್ರತಿನಿಧಿ ಸಭೆಗೆ ಆಗಮಿಸುವ ಎಲ್ಲರಿಗೂ ರಾಜ್ಯ ಆರೋಗ್ಯ ಇಲಾಖೆಯಿಂದ ಕರೊನಾ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಉಷ್ಣಾಂಶ ಪರೀಕ್ಷೆ ನಡೆಸಿ, ಹೆಸರು, ವಿವರ ಪಡೆಯಲಾಗುತ್ತಿದೆ. ಸಬೆ ನಡೆಯುವ ಪ್ರದೇಶದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದ ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಮಾಧ್ಯಮ ಸಂಚಾಲಕ ಪ್ರನ ದೀಪ್, ಸಾಮಾನ್ಯವಾಗಿ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಊಟಕ್ಕೆ ಸ್ಟೀಲ್ ತಟ್ಟೆ ಹಾಗೂ ಲೋಟ ಬಳಕೆ ಮಾಡಲಾಗುತ್ತದೆ. ಆದರೆ, ಈ ಬಾರಿ ಅಡಕೆ ಪಟ್ಟೆಯ ತಟ್ಟೆ ಹಾಗೂ ಕಾಗದದ ಲೋಟ ಬಳಸಲಾಗುತ್ತಿದೆ. ಕುಡಿಯಲು ಶುದ್ಧೀಕರಿಸಿದ ನೀರು ಬಳಕೆ ಮಾಡಲಾಗುತ್ತಿದೆ. ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಸಂಪೂರ್ಣ ನೈರ್ಮಲ್ಯ ಕಾಪಾಡಿಕೊಳ್ಳಲಾಗಿದೆ. ಆವರಣದಲ್ಲೆ ವೈದ್ಯರ ತಂಡ ಇದೆ ಎಂದರು.