

ಮುಂಬೈ: ಸುಮಾರು 2 ವರ್ಷ 734 ವ್ಯವಹಾರಗಳ ಮೂಲಕ ಮುಂಬೈಯ 80 ವರ್ಷದ ವೖದ್ಧರೊಬ್ಬರು ಹೆಚ್ಚೂಕಮ್ಮಿ 9 ಕೋಟಿ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಸೈಬರ್ ವಂಚನೆಗೆ ಒಳಗಾಗಿದ್ದೇನೆಂದು ಮನವರಿಕೆಯಾಗಿ ಆಘಾತಕ್ಕೊಳಗಾದ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಬುದ್ಧಿಮಾಂದ್ಯತೆಯಿಂದ (ಡಿಮೆನ್ಶಿಯಾ) ಬಳಲುತ್ತಿರುವುದು ತಿಳಿದು ಬಂದಿದೆ. ಪ್ರೀತಿ-ಸಹಾನುಭೂತಿಯ ನೆಪದಲ್ಲಿ ಫೇಸ್ಬುಕ್ನಲ್ಲಿ ಫ್ರೆಂಡ್ಸ್ ಆದ ‘ಮಹಿಳೆಯರಿಂದ’ ವೃದ್ಧ ಮೋಸ ಹೋಗಿದ್ದು, ಆ ನಾಲ್ವರೂ ಒಬ್ಬರೇ ವ್ಯಕ್ತಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂಬೈ ನಿವಾಸಿ ವೃದ್ಧ 2023ರ ಏಪ್ರಿಲ್ನಲ್ಲಿ ಫೇಸ್ಬುಕ್ನಲ್ಲಿ ಶಾರ್ವಿ ಎಂಬ ಮಹಿಳೆಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಇಬ್ಬರಿಗೂ ಪರಸ್ಪರ ಪರಿಚಯವಿರಲಿಲ್ಲ, ಫ್ರೆಂಡ್ ರಿಕ್ವೆಸ್ಟ್ ಸ್ವೀಕಾರವಾಗಿರಲಿಲ್ಲ. ಕೆಲ ದಿನಗಳ ನಂತರ ಶಾರ್ವಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು ಈತ ಅದನ್ನು ಅಂಗೀಕರಿಸಿದ್ದ. ಬಳಿಕ ಇಬ್ಬರೂ ಚಾಟಿಂಗ್ ಆರಂಭಿಸಿದ್ದು ಫೋನ್ ಸಂಖ್ಯೆಗಳನ್ನೂ ವಿನಿಮಯ ಮಾಡಿಕೊಂಡಿದ್ದರು. ಹೀಗೆ ಸಂಭಾಷಣೆ ಕ್ರಮೇಣ ಫೇಸ್ಬುಕ್ನಿಂದ ವಾಟ್ಸ್ ಆಪ್ಗೆ ವರ್ಗಾವಣೆಯಾಗಿತ್ತು. ತಾನು ಪತಿಯಿಂದ ಪ್ರತ್ಯೇಕವಾಗಿ ಮಕ್ಕಳೊಂದಿಗೆ ವಾಸಿ ಸುತ್ತಿರುವುದಾಗಿ ಹೇಳಿದ್ದ ಶಾರ್ವಿ, ಅಸ್ವಸ್ಥ ಮಕ್ಕಳ ಚಿಕಿತ್ಸೆಗಾಗಿ ಹಣ ಕೊಡುವಂತೆ ಕೇಳಲು ಆರಂಭಿಸಿದ್ದಳು. ಕೆಲವು ದಿನಗಳ ನಂತರ ಕವಿತಾ, ಶಾರ್ವಿಯ ಸೋದರಿ ಎನ್ನಲಾದ ದಿನಾಜ್ ಮತ್ತು ಜಾಸ್ಮೈನ್ ಎಂಬ ಮಹಿಳೆಯರೂ ವೃದ್ಧನಿಗೆ ವಾಟ್ಸ್ ಆಪ್ ಸಂದೇಶ ಕಳಿಸಲು ಆರಂಭಿಸಿ ಹಣಕ್ಕಾಗಿ ಪೀಡಿಸತೊಡಗಿದ್ದರು. ಶಾರ್ವಿ ಮೃತಪಟ್ಟಿದ್ದು ಆಕೆಯ ಆಸ್ಪತ್ರೆ ಬಿಲ್ ಪಾವತಿಸುವಂತೆ ಒತ್ತಾಯಿಸಿದ್ದ ದಿನಾಜ್, ಶಾರ್ವಿ ಮತ್ತು ವೃದ್ಧನ ವಾಟ್ಸ್ಆಪ್ ಚಾಟ್ಗಳ ಸ್ಕ್ರೀನ್ಶಾಟ್ಸ್ ಕಳಿಸಿ ಬ್ಲಾ್ಯಕ್ವೆುೕಲ್ ಮಾಡಿ ಹಣ ಲೂಟಿ ಮಾಡಿದ್ದಳು.
2023ರ ಏಪ್ರಿಲ್ನಿಂದ 2025ರ ಜನವರಿವರೆಗೆ 734 ವ್ಯವಹಾರಗಳಲ್ಲಿ ವೃದ್ಧನ ಬ್ಯಾಂಕ್ ಖಾತೆಯಿಂದ ಒಟ್ಟು 8.7 ಕೋಟಿ ರೂ. ಬರಿದಾಗಿತ್ತು. ಐದು ಲಕ್ಷ ರೂ. ಕಳಿಸುವಂತೆ ಆತ ತನ್ನ ಮಗನಿಗೆ ಹೇಳಿದಾಗ ಪುತ್ರ ಅನುಮಾನ ಬಂದು ವಿಚಾರಿಸಿದಾಗ ತಂದೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.