Bihar Election | ನಮ್ಮನ್ನು ಗೆಲ್ಲಿಸಿ.. ಬಿಹಾರವನ್ನು ದೇಶದಲ್ಲೆ ನಂಬರ್​ 1 ಮಾಡುತ್ತೇವೆ; ಈ ವರ್ಗಕ್ಕೆ 50 ಲಕ್ಷ ರೂ ವಿಮೆಯ ಭರವಸೆ ನೀಡಿದ ತೇಜಸ್ವಿ ಯಾದವ್​

Tejashwi Yadav
Published on

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ಅಬ್ಬರದ ಪ್ರಚಾರ ಆರಂಭಿಸಿರುವ ಮಹಾಘಟಬಂಧನ್‌ನ, ಆಕರ್ಷಕ ಘೋಷಣೆಗಳ ಮೂಲಕ ಮತದಾರರ ಮನವೊಲಿಕೆ ಪ್ರಯತ್ನವನ್ನು ಮುಂದುವರೆಸಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪಂಚಾಯತ್​ ಪ್ರತಿನಿಧಿಗಳಿಗೆ 50 ಲಕ್ಷ ರೂ ವಿಮೆಯ ರಕ್ಷಣೆ ಮತ್ತು ಪಿಂಚಣಿ ಯೋಜನೆಯನ್ನು ಭಾನುವಾರ (ಅ26) ಘೋಷಿಸಿದೆ.

ಉಪಮುಖ್ಯಮಂತ್ರಿ ಅಭ್ಯರ್ಥಿ ಮುಖೇಶ್ ಸಹಾನಿಯೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್​, ಪಂಚಾಯತ್‌ಗಳ ಪ್ರತಿನಿಧಿಗಳು ಪಿಂಚಣಿ ಸೌಲಭ್ಯಗಳಿಗಾಗಿ ಅನೇಕ ದಿನಗಳಿಂದ ಬೇಡಿಕೆ ಇಟ್ಟಿದ್ದರು, ಅವರ ಬೇಡಿಕೆಯಂತೆ ಪಿಂಚಣಿ ನೀಡಬೇಕೆಂದು ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ನಿರ್ಧರಿಸಿದ್ದೇವೆ. ಅದರೊಂದಿಗೆ ನಾಗರಿಕ ಪೂರೈಕೆ ಜಾಲದ ಭಾಗವಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವವರ ಲಾಭದ ಅಂಶವನ್ನು ಸಹ ನಾವು ಹೆಚ್ಚಿಸುತ್ತೇವೆ ಎಂದು ಘೋಷಿಸಿದರು.

ಇದಷ್ಟೆ ಅಲ್ಲದೇ ಕುಂಬಾರಿಕೆ, ಕಮ್ಮಾರ ಮತ್ತು ಮರಗೆಲಸದಂತಹ ವೃತ್ತಿಗಳಲ್ಲಿ ತೊಡಗಿರುವವರಿಗೆ ತಮ್ಮ ಕೆಲಸವನ್ನು ವಿಸ್ತರಿಸಿಕೊಳ್ಳಲು 5 ಲಕ್ಷ ರೂ. ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡಲಾಗುವುದು, ನಮ್ಮ ಮೈತ್ರಿಕೂಟ ಬಿಹಾರದ ಬದಲಾವಣೆಗಾಗಿ ಕಾರ್ಯನಿರ್ವಹಿಸಲು ಉತ್ಸುಕತೆಯಿಂದ ಕಾಯುತ್ತಿದೆ. ರಾಜ್ಯದ ಮತದಾರರು ಈ ಸರ್ಕಾರದ ಜನವಿರೋಧಿ ನೀತಿಗೆ ಬೇಸತ್ತಿದ್ದು, ಖಂಡಿತ ಬದಲಾವಣೆ ತರಲಿದ್ದಾರೆ. ಎನ್​ಡಿಎ ಕಳೆದ 20 ವರ್ಷದಲ್ಲಿ ಮಾಡಲಾಗದನ್ನು, ನಾವು ಕೇವಲ ಇಪ್ಪತ್ತು ತಿಂಗಳಲ್ಲಿ ಸಾಧಿಸಿ ಬಿಹಾರವನ್ನು ನಂಬರ್​ 1 ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾಘಟಬಂಧನ್‌ನಲ್ಲಿ ಅಸಮಧಾನವಿದೆ ಎನ್ನುವ ಮಾತನ್ನು ತಳ್ಳಿಹಾಕಿದ ತೇಜಸ್ವಿ, ಮುಖೇಶ್ ಸಹಾನಿ ಮತ್ತು ನಾನು ಒಟ್ಟಿಗೆ ಪ್ರಚಾರ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಶೀಘ್ರದಲ್ಲೇ ಬರುತ್ತಾರೆ ಎಂದರು. ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ 'ಜೀವಿಕಾ ದೀದಿ'ಗಳಾಗಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಖಾಯಂ ಮಾಡಲಾಗುವುದು, ಆ ಎಲ್ಲ ಮಹಿಳೆಯರಿಗೆ ತಿಂಗಳಿಗೆ 30,000 ರೂ ಸಂಬಳ ನೀಡುವುದಾಗಿ ಘೋಷಿಸಿದ್ದರು. ಇದರ ಜೊತೆಗೆ, ಸರ್ಕಾರ 2,000 ರೂ.ಗಳ ಹೆಚ್ಚುವರಿ ಭತ್ಯೆ ಮತ್ತು 5 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಸಹ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.

243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net