24 ರೂ. ಹೆಚ್ಚುವರಿ ಪಡೆದಿದ್ದಕ್ಕೆ 25 ಸಾವಿರ ದಂಡ!

court
Published on

ಶಿವಮೊಗ್ಗ: ಒಂದು ಕೆಜಿ ಚಹಾ ಪುಡಿಯ ಗರಿಷ್ಠ ಮಾರಾಟ ಬೆಲೆ 825 ರೂ. ಆಗಿತ್ತು. ಆದರೆ ಅದನ್ನು 849 ರೂ.ಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಆನ್‌ಲೈನ್ ಸೇವಾ ಸಂಸ್ಥೆ ಹಾಗೂ ಸಾಗಣೆ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.

ಶಿವಮೊಗ್ಗದ ಮೆಹಬೂಬ್ ಮುದಾಸಿರ್ ಖಾನ್ ಎಂಬುವವರು ಆನ್‌ಲೈನ್‌ನಲ್ಲಿ ಒಂದು ಕೆಜಿ ಟೀ ಪುಡಿ ಬುಕ್ ಮಾಡಿದ್ದರು. ಅದಕ್ಕೆ 849 ರೂ. ಹಾಗೂ ಮನೆಗೆ ಸರಬರಾಜು ಮಾಡಿದ್ದಕ್ಕೆ ಸಾಗಣೆ ವೆಚ್ಚ 41 ರೂ. ಸೇರಿ ಒಟ್ಟು 890 ರೂ. ಪಡೆಯಲಾಗಿತ್ತು. ಇದನ್ನು ಸ್ವೀಕರಿಸಿದ ಬಳಿಕ ಗ್ರಾಹಕರು ಪರಿಶೀಲಿಸಿದಾಗ ಟೀಪುಡಿ ಪ್ಯಾಕ್ ಮೇಲೆ ಎಂಆರ್‌ಪಿ 825 ರೂ. ಎಂದು ನಮೂದಾಗಿತ್ತು. ಹೆಚ್ಚುವರಿ ಹಣ ಪಡೆದ ಹಿನ್ನೆಲೆಯಲ್ಲಿ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಸೇವಾ ನ್ಯೂನತೆ ಗುರುತಿಸಿ ಕೋರ್ಟ್ ವ್ಯಾಜ್ಯ ಬಾಬ್ತು ಹಾಗೂ ಮಾನಸಿಕ ಹಿಂಸೆ ನೀಡಿದ ಕಾರಣಕ್ಕೆ ಟೀ ಪುಡಿ ಪೂರೈಸಿದ ಹಾಗೂ ಸಾಗಣೆ ಮಾಡಿದ ಸಂಸ್ಥೆಗೆ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ದಂಡ ವಿಧಿಸಿ ತೀರ್ಪಿತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net