ಸುಶಾಂತ್​ ಸಹೋದರಿಯ ಎಫ್​ಡಿಯಿಂದ 2.63 ಕೋಟಿ ರೂ. ಸಿಎಗೆ ವರ್ಗಾವಣೆ, ಇಡಿ ವಿಚಾರಣೆಯಲ್ಲಿ ಬಾಯ್ಬಿಟ್ಟ ರಿಯಾ

rajput_rhea
Published on

ಮುಂಬೈ: ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರು ತಮ್ಮ ಸಹೋದರಿಯ ಹೆಸರಿನಲ್ಲಿ 4.5 ಕೋಟಿ ರೂ. ನಿಶ್ಚಿತ ಠೇವಣಿ ಇರಿಸಿದ್ದರು. ಇದರ ಬಡ್ಡಿ ಎಲ್ಲವೂ ಸೇರಿ 4.63 ಕೋಟಿ ರೂ. ಆಗಿತ್ತು. ಆದರೆ, ರಿಯಾ ಚಕ್ರವರ್ತಿ ಅವರು ಸುಶಾಂತ್​ ಅವರ ಜೀವನದೊಳಗೆ ಪ್ರವೇಶಿಸುತ್ತಿದ್ದಂತೆ ಈ ನಿಶ್ಚಿತ ಠೇವಣಿಯಿಂದ 2.63 ಕೋಟಿ ರೂ. ಮೊತ್ತವನ್ನು ಇಬ್ಬರು ಲೆಕ್ಕಪರಿಶೋಧಕರ (ಸಿಎ) ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಲಾಗಿದೆ. ತನ್ಮೂಲಕ ಅದನ್ನು ಕೇವಲ 2 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ.

2019ರ ಮೇಯಿಂದ 2020ರ ಏಪ್ರಿಲ್​ ನಡುವೆ ಈ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ. ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಸ್ವತಃ ರಿಯಾ ಚಕ್ರವರ್ತಿ ಅವರು ಈ ಬಗ್ಗೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ರಿಯಾ ಅವರ ಒತ್ತಾಸೆಯ ಮೇರೆಗೆ ಸುಶಾಂತ್​ ಸಿಂಗ್​ ರಜಪೂತ್​ ಈ ವರ್ಗಾವಣೆ ಮಾಡಿದ್ದಾರೆ ಎಂದು ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಆರೋಪಿಸಿದ್ದಾರೆ.

ಇದಷ್ಟೇ ಅಲ್ಲ. ಸುಶಾಂತ್​ ಅವರ ಹಲವಾರು ಖಾತೆಗಳಲ್ಲಿ ಇದ್ದ ಹಣವನ್ನು ಭಾರಿ ಪ್ರಮಾಣದಲ್ಲಿ ಹಿಂಪಡೆದಿರುವುದು, ಅವುಗಳಿಗೆ ಸಮರ್ಪಕವಾದ ವಿವರಣೆಗಳನ್ನು ಒದಗಿಸದೇ ಇರುವುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಯಾ ಚಕ್ರವರ್ತಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಬಿಹಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​, ನನ್ನ ಪುತ್ರನ ಬ್ಯಾಂಕ್​ ಅಕೌಂಟ್​ನಲ್ಲಿ 17 ಕೋಟಿ ರೂ. ನಗದು ಇತ್ತು ಎಂಬುದು ಆ ಬ್ಯಾಂಕ್ ಸ್ಟೇಟ್​ಮೆಂಟ್​ನಿಂದ ತಿಳಿದುಬರುತ್ತದೆ. ಆದರೆ, ಕಳೆದೊಂದು ಸಾಲಿನಲ್ಲಿ ಈ ಖಾತೆಯಿಂದ ಒಟ್ಟು 15 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಹಣ ವರ್ಗಾವಣೆಗೊಂಡಿರುವ ಬ್ಯಾಂಕ್​ ಖಾತೆಗಳಿಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ನನ್ನ ಪುತ್ರನಿಗೆ ಸಂಬಂಧಿಸಿದ ಎಲ್ಲ ಬ್ಯಾಂಕ್​ ಖಾತೆಗಳ ವಹಿವಾಟಿನಲ್ಲಿ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅಲ್ಲದೆ, ರಿಯಾ ಅವರು ನನ್ನ ಪುತ್ರನ ಬ್ಯಾಂಕ್​ ಖಾತೆಗಳಿಂದ ಹಾಗೂ ಆತನ ಕ್ರೆಡಿಟ್​ ಕಾರ್ಡ್​ಗಳಿಂದ ಎಷ್ಟೆಲ್ಲ ಹಣವನ್ನು ಹೇರಾಪೇರಿ ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net