

2,700 ಕೋಟಿ ರೂ. ಮನೆ ನಿರ್ಮಿಸಿ, 8,400 ಕೋಟಿ ರೂ. ಮೌಲ್ಯದ ವಿಮಾನದಲ್ಲಿ ಹಾರಾಟ ನಡೆಸಿ, 10 ಲಕ್ಷ ರೂ. ಸೂಟ್ ಧರಿಸಿದವರಿಂದ ಶೀಷ್‌ಮಹಲ್(ಗಾಜಿನಮನೆ) ಪ್ರಸ್ತಾಪ ಸೂಕ್ತವಲ್ಲ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ವಸತಿ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ನಾನು ಶೀಷ್ಮಹಲ್ (ಗಾಜಿನ ಅರಮನೆ) ಅನ್ನು ನಿರ್ಮಿಸಬಹುದಿತ್ತು, ಆದರೆ ನನ್ನ ದೇಶವಾಸಿಗಳಿಗೆ ಶಾಶ್ವತ ಮನೆಗಳು ಸಿಗಬೇಕು ಎಂಬುದು ನನ್ನ ಕನಸು ಎಂದು ಹೇಳಿದ್ದ ಮಾತಿಗೆ ತಿರುಗೇಟು ನೀಡಿದರು.
ದೆಹಲಿಯಲ್ಲಿರುವುದು ಎಎಪಿ ಅಲ್ಲ. ಅದು ವಿಪತ್ತು ಎಂದು ಹೇಳಿದ್ದ ಮೋದಿ ಮಾತಿಗೆ, ನಿಜವಾದ ಅನಾಹುತ ಬಿಜೆಪಿಯಲ್ಲೇ ಇದೆ. ವಿಪತ್ತು ದೆಹಲಿಯಲ್ಲಲ್ಲ; ಅದು ಬಿಜೆಪಿಯೊಳಗೆ ಇದೆ. ಮೊದಲ ಅನಾಹುತವೆಂದರೆ ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆ ಇಲ್ಲದಿರುವುದು. ಎರಡನೆಯದು ಬಿಜೆಪಿಗೆ ನಿರೂಪಣೆ ಇಲ್ಲ. ಮೂರನೆಯದು ದೆಹಲಿ ಚುನಾವಣೆಗೆ ಬಿಜೆಪಿಗೆ ಯಾವುದೇ ಅಜೆಂಡಾ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿಯ 2020ರ ಪ್ರಣಾಳಿಕೆಯು 2022ರ ವೇಳೆಗೆ ದೆಹಲಿಯಲ್ಲಿ ಎಲ್ಲರಿಗೂ ಪಕ್ಕಾ ಮನೆಗಳ ಭರವಸೆ ನೀಡಿದೆ. ಐದು ವರ್ಷಗಳಲ್ಲಿ ಕೇವಲ 4,700 ಮನೆಗಳನ್ನು ಮಾತ್ರ ಹಸ್ತಾಂತರಿಸಲಾಗಿದೆ ಎಂದು ವ್ಯಂಗ್ಯವಾಡಿದರು.
ದೆಹಲಿಯಲ್ಲಿ ಪ್ರಧಾನಿಯವರು ತಮ್ಮ 43 ನಿಮಿಷಗಳ ಭಾಷಣದಲ್ಲಿ 39 ನಿಮಿಷಗಳ ಕಾಲ ದೆಹಲಿ ಸರ್ಕಾರವನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ ಅರವಿಂದ್ ಕೇಜ್ರಿವಾಲ್, ಕಳೆದ ಅವಧಿಯಲ್ಲಿ ದೆಹಲಿಯಲ್ಲಿ ತಮ್ಮ ಪಕ್ಷವು ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದರೆ ಮೂರು ಗಂಟೆಯೂ ಸಾಕಾಗುವುದಿಲ್ಲ ಎಂದು ಹರಿಹಾಯ್ದರು.