

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಕಣವು 3 ಪ್ರಮುಖ ಪಕ್ಷಗಳ ತುರುಸಿನ ಪೈಪೋಟಿಗೆ ಸಾಕ್ಷಿಯಾಗಿದ್ದು, ಮಾತಿನ ಅಬ್ಬರದೊಂದಿಗೆ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆಬಿದ್ದಿದೆ. ಘಟಾನುಘಟಿಗಳು ಪಾಲ್ಗೊಳ್ಳುವ ಮೂಲಕ ಚುನಾವಣೆಯ ಪ್ರಚಾರದ ಅಖಾಡಕ್ಕೆ ರಂಗೇರಿಸಿ, ತಳಹಂತದ ಕಾರ್ಯಕರ್ತರ ಪಡೆಯಲ್ಲೂ ಉತ್ಸಾಹ ತುಂಬಿದರು. ಕರೊನಾ ಹರಡುವ ಭೀತಿ ಮಧ್ಯೆಯೂ ಜನಬಲ ಪ್ರದರ್ಶನವೂ ಭರ್ಜರಿಯಾಗಿ ನಡೆಯಿತು. ವಿಷಯಾಧಾರಿತಕ್ಕಿಂತಲೂ ಆರೋಪ- ಪ್ರತ್ಯಾರೋಪ, ವ್ಯಕ್ತಿಗತ ಟೀಕೆ-ಟಿಪ್ಪಣಿಗಳೇ ಪ್ರಚಾರದ ಪ್ರಮುಖಾಂಶವಾಗಿದ್ದರಿಂದ ಪರಸ್ಪರರ ಮಾತಿನ ಬಾಣ ಬಿರುಸಾಗಿದ್ದವು. ‘ಕೌರವರು’, ‘ಪಾಂಡವರು’, ‘ಶಕುನಿ’, ‘ಕುರುಕ್ಷೇತ್ರ’ ಮುಂತಾದ ಉಪಮೆಗಳು ಯಥೇಚ್ಛವಾಗಿ ಬಳಕೆಯಾದವು.
ನೇರ ಭೇಟಿ ತಂತ್ರ: ಬಹಿರಂಗ ಪ್ರಚಾರ ಅಂತ್ಯವಾದರೂ ಮತದಾನದ ಹಿಂದಿನ ರಾತ್ರಿವರೆಗೂ ತೆರೆಮರೆಯ ಪ್ರಚಾರ ಮುಂದುವರಿದು, ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಎಲ್ಲ ಪಟ್ಟುಗಳು ಪ್ರಯೋಗವಾಗಲಿವೆ. ಕ್ಷೇತ್ರದ ಗಡಿಯಲ್ಲಿರುವ ಆಯಕಟ್ಟಿನಲ್ಲಿ ಸ್ಥಳದಲ್ಲಿ ಕುಳಿತು ಯೋಜಿತ ಕಾರ್ಯತಂತ್ರ ರೂಪಿಸಿ, ಅನುಷ್ಠಾನಕ್ಕಾಗಿ ಕಾರ್ಯಪಡೆಯನ್ನು ನಿಯೋಜಿಸಿಕೊಂಡಿದ್ದಾರೆ. ತೆರೆದ ಪ್ರಚಾರಕ್ಕಿಂತಲೂ ನೇರ ಭೇಟಿ ಹೆಚ್ಚು ಪರಿಣಾಮಕಾರಿ, ಖಚಿತತೆ ಯುಳ್ಳದ್ದೂ ಎಂದು ನುರಿತವರಿಗೆ ಗೊತ್ತಿದೆ. ಮತ ಖಾತರಿಗೆ ಬೇಕಾದ ತಂತ್ರಗಳ ಸಫಲತೆಯೇ ಫಲಿತಾಂಶಕ್ಕೆ ಬುನಾದಿಯಾಗಲಿದೆ. ಹೀಗಾಗಿ ಜವಾಬ್ದಾರಿ ಹೊತ್ತ ಮುಖಂಡರ ಚಾಕಚಕ್ಯತೆ ಪರೀಕ್ಷೆಗೊಡ್ಡಲಿದ್ದು, ಅಧಿಕಾರ, ನಾಯಕರ ವರ್ಚಸ್ಸು ತನ್ನದೇ ಆದ ಪ್ರಭಾವ ಬೀರಲಿದೆ.
ಉಪ ಕದನದಿಂದ ಕರೊನಾತಂಕ
ಉಪಚುನಾವಣೆ ಪ್ರಚಾರದ ವೇಳೆ ಖ್ಯಾತನಾಮರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕರೊನಾ ನಿಯಮಗಳನ್ನು ಬಹಿರಂಗವಾಗಿ ಗಾಳಿಗೆ ತೂರುತ್ತಿರುವುದು ಮತ್ತೊಮ್ಮೆ ಕರೊನಾ ಏರಿಕೆಯಾಗುತ್ತದೆಯೇ ಎಂಬ ಆತಂಕ ಹುಟ್ಟಿಸಿದೆ. ರಾಜರಾಜೇಶ್ವರಿ ನಗರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸದಿರುವುದು ಹಾಗೂ ಮಿತಿಗಿಂತ ಹೆಚ್ಚು ಜನ ಒಂದೇ ಸ್ಥಳದಲ್ಲಿ ಸೇರಿದ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಿಜೆಪಿ 8, ಕಾಂಗ್ರೆಸ್ 4, ಜೆಡಿಎಸ್ 2 ಹಾಗೂ ನಟ ದರ್ಶನ್ ಪ್ರಚಾರದ ಮೇಲೆ ಒಂದು ಸೇರಿ 15 ಪ್ರಕರಣ ದಾಖಲಿಸಲಾಗಿದೆ. ಶಿರಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ 3 ಹಾಗೂ ಪ್ರಚಾರ ಸಂದರ್ಭದಲ್ಲಿ 9 ಸೇರಿ 12 ಪ್ರಕರಣ ದಾಖಲಾಗಿವೆ. ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಚುನಾವಣೆ ಅಭ್ಯರ್ಥಿಯಿಂದ ದಂಡ ವಸೂಲಿ ಅಥವಾ ತಪ್ಪಿತಸ್ಥ ವ್ಯಕ್ತಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಸಿದ್ದರಾಮಯ್ಯ ವಿರುದ್ಧ ಆಕ್ರೋಶ
ಬೆಂಗಳೂರು: ಬಿಜೆಪಿ ಸೇರಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ನ 17 ಜನರ ಸ್ಥಿತಿ ಉಪ ಚುನಾವಣೆ ಬಳಿಕ ನಾಯಿಪಾಡಾಗುತ್ತದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಸಿದ್ದರಾಮಯ್ಯ ಯಾವ ನಾಯಿಯಾಗಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಮೊದಲು ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದನ್ನು ನೋಡಿಕೊಳ್ಳಲಿ. ಆನಂತರ ಇನ್ನೊಬ್ಬರ ಬಗ್ಗೆ ಯೋಚಿಸಲಿ ಎಂದು ಸಚಿವ ಬಿ.ಸಿ.ಪಾಟೀಲ್ ಕೊಪ್ಪಳದಲ್ಲಿ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಹತಾಶರಾಗಿ ಹೇಳುತ್ತಿದ್ದಾರೆ. ಅವರ ಪಕ್ಷದಲ್ಲಿ ಇನ್ನಷ್ಟು ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎನ್ನುವ ಅಂಜಿಕೆ ಇದೆ. ಅವರನ್ನು ತಡೆಯಲು ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಬಾಗಲಕೋಟೆಯಲ್ಲಿ ತಿರುಗೇಟು ನೀಡಿದ್ದಾರೆ. ವಲಸೆ ಬಂದವರು ಎಂಬ ಕಾರಣಕ್ಕೆ ಮೂಲೆಗುಂಪು ಮಾಡಲಾಗುತ್ತಿದೆ, ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಕೈ ಮೇಲಾಗುತ್ತಿದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಒಬ್ಬ ಮಾಜಿ ಸಿಎಂ ಈ ರೀತಿ ಮಾತನಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಮಂಗಳೂರಿನಲ್ಲಿ ಕಾಲೆಳೆದಿದ್ದಾರೆ.