ಬೇಕರಿ ಮುಂದೆಯೇ ರೌಡಿ ಹತ್ಯೆ..!

murder
Published on

ಬೆಂಗಳೂರು: ಬೇಕರಿ ಮುಂದೆ ಟೀ ಕುಡಿಯುತ್ತಿದ್ದ ರೌಡಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಚುಂಚಘಟ್ಟ ಮುಖ್ಯರಸ್ತೆ ನಿವಾಸಿ ಸಹದೇವ (32) ಕೊಲೆಯಾದ ರೌಡಿ.

ಬುಧವಾರ ರಾತ್ರಿ 9.30ರಲ್ಲಿ ಚುಂಚಘಟ್ಟ ಮುಖ್ಯರಸ್ತೆಯಲ್ಲಿ ಬೇಕರಿ ಬಳಿ ಟೀ ಕುಡಿಯಲು ಬಂದಿದ್ದಾನೆ. ಅಲ್ಲಿಯೇ ಟೀ ಕುಡಿಯುತ್ತಿದ್ದ ದುಷ್ಕರ್ಮಿಗಳು ಏಕಾಏಕಿ ಸಹದೇವನ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

ಸುಬ್ರಮಣ್ಯಪುರ ಠಾಣೆ ರೌಡಿ ಸಹದೇವ ವಿರುದ್ಧ ದರೋಡೆ, ಸುಲಿಗೆ, ಕೊಲೆ ಯತ್ನ, ಕೊಲೆ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವ ಸಾಧ್ಯತೆಯಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net