

ಬೆಂಗಳೂರು: ರೌಡಿಶೀಟರ್ ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಕಾಟನ್‌ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರ್ ಮತ್ತು ಸ್ಟೀನ್ ಬಂಧಿತರು. ಶರತ್ ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಂಬು,ಕಿರಣ್, ಶೇಖರ್, ಮಣಿಕಂಠನನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿಸಿದ್ದ ಪೊಲೀಸರು ಭಾನುವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಸ್ಟೀನ್ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಶಿವರಾತ್ರಿಯಂದು ಫ್ಲವರ್ ಗಾರ್ಡನ್ ನಿವಾಸಿ ಶಿವ ಅಲಿಯಾಸ್ ಶರತ್ (೩೫)ಮನೆಗೆ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಗಳು ಈತ ಬರುವುದನ್ನೇ ಕಾದು ಹೊಂಚು ಹಾಕಿ ಇನ್ನೇನು ಮನೆ ಸ್ವಲ್ಪ ದೂರ ಇರುವಂತೆಯೇ ಏಕಾಏಕಿ ದಾಳಿ ಮಾಡಿ ಮಾರಕಾಸದಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್‌ಪೇಟೆ ಠಾಣೆ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಗೆ ಕಾಟ ಕೊಟ್ಟಿದ್ದ ಶರತ್:
ಶರತ್ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಪ್ಪ ಗಾರ್ಡನ್‌ನಲ್ಲಿ ರೌಡಿಶೀಟರ್ ಆಗಿದ್ದ. ಶರತ್ ಮತ್ತು ಆರೋಪಿಗಳು ಕಾಟನ್‌ಪೇಟೆಯ ಜಾಲಿ ಮೊಹಲ್ಲಾ ಎಂಬ ಏರಿಯಾದಲ್ಲಿ ವಾಸವಿದ್ದರು. ೨೦೧೭ ರಿಂದ ಇವರ ಮಧ್ಯೆ ವೈಷಮ್ಯವಿತ್ತು. ಮೃತ ಶರತ್ ಆರೋಪಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ತೊಂದರೆ ಕೊಡುತ್ತಿದ್ದ. ಜತೆಗೆ ಆರೋಪಿಗಳನ್ನು ಏರಿಯಾ ಬಿಡುವಂತೆ ಮಾಡಿದ್ದ. ಜತೆಗೆ ಚಂದ್ರಶೇಖರ್ ಸಹಚರನಾಗಿದ್ದ ಪ್ರಭಾಕರ್‌ನನ್ನು ೨೦೨೦ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಮೃತ ಶರತ್ ಕೂಡ ಭಾಗಿಯಾಗಿದ್ದ. ಇದರಿಂದ ಶರತ್ ಮೇಲೆ ಆರೋಪಿಗಳು ಆಕ್ರೋಶಗೊಂಡಿದ್ದರು. ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಮೂರು ವರ್ಷಗಳಿಂದ ಜೈಲಿನಲ್ಲಿ ಇದ್ದ ಶರತ್ ೆ.೧೦ ಜೈಲಿನಿಂದ ಬಿಗುಗಡೆಯಾಗಿದ್ದ. ಈ ಮಾಹಿತಿ ತಿಳಿದಿದ್ದ ಆರೋಪಿಗಳು ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.