ಬಸ್ ಕ್ಲೀನರ್ ಆಗಿದ್ದ ರೌಡಿ ಸೆರೆ

arrested
Published on

ಬೆಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕುಣಿಗಲ್- ಬೆಂಗಳೂರು ಮಾರ್ಗದ ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿ ಓಡಾಡಿಕೊಂಡಿದ್ದ ರೌಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಂಪಿಗೆಹಳ್ಳಿಯ ಮಂಜುನಾಥ ಅಲಿಯಾಸ್ ಒ.ಸಿ. ಮಂಜ ಬಂಧಿತ. ಈತನ ವಿರುದ್ಧ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿತ್ತು. ಇನ್‌ಸ್ಪೆಕ್ಟರ್ ಬಾಲಾಜಿ ನೇತೃತ್ವದ ತಂಡವು ಕುಣಿಗಲ್- ಮಾಗಡಿ- ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಕ್ಲೀನರ್ ಆಗಿದ್ದ ಮಂಜನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ.

ಹಲವು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಮಂಜ ನಿರತನಾಗಿದ್ದ. ಈತನ ಮೇಲೆ ಕೊಲೆ, ಕೊಲೆ ಯತ್ನ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮಾಡಿದ ಆರೋಪದಡಿ ಆರು ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್ ಚರಿತ್ರೆ ಹಿನ್ನಲೆಯಲ್ಲಿ ಸಂಪಿಗೆಹಳ್ಳಿ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. 6 ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಮೇಲೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net