

ಮಂಡ್ಯ: ಬಾಸ್ ಎಂದು ಕರೆಯದಿದ್ದಕ್ಕೆ ಯುವಕನೊಬ್ಬನ ಮೇಲೆ ಪುಡಿ ರೌಡಿಗಳ ಗ್ಯಾಂಗ್ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಮಂಡ್ಯದ ಹೊಳಲು ಗ್ರಾಮದಲ್ಲಿ ನಡೆದಿದೆ.
ಶಾರಂತ್ (29) ಹಲ್ಲೆಗೊಳಗಾದ ಯುವಕ. ಹೊಳಲು ಗ್ರಾಮದ ಮಾದ ಅಲಿಯಾಸ್ ಮಾದಪ್ಪ ಮತ್ತು ಆತನ ಗ್ಯಾಂಗ್ ಹಾಡಹಗಲಲ್ಲೇ ನಡು ರಸ್ತೆಯಲ್ಲಿ ಲಾಂಗ್, ಡ್ರಾಗರ್ ಹಿಡಿದು ಅಟ್ಟಹಾಸ ಮೆರೆದಿದ್ದಾರೆ. ಮಾದಪ್ಪ, ಚಿಂಟು, ತರುಣ್, ಸುಶಾಂತ್ ಹಾಗೂ ಚಂದನ್ ಹಲ್ಲೆ ಮಾಡಿದ ಕಿರಾತಕರು.
ಬರ್ತಡೇ ಹಿನ್ನಲೆ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಶಾರಂತ್ ಹುಟ್ಟೂರಿಗೆ ಬಂದಿದ್ದ. ಗ್ರಾಮದ ಸರ್ಕಲ್ ಒಂದರಲ್ಲಿ ಸ್ನೇಹಿತರ ಜತೆ ಮಾತನಾಡುತ್ತ ನಿಂತಿದ್ದ. ಈ ವೇಳೆ ಎರಡು ಬೈಕ್ನಲ್ಲಿ ಮಾದ ಹಾಗೂ ಆತನ ಗ್ಯಾಂಗ್ ಅಲ್ಲಿಗೆ ಬಂದು ಶಾರಂತ್ ಜತೆ ಕ್ಯಾತೆ ತೆಗೆದಿದ್ದಾರೆ. ಅಲ್ಲದೆ, ಏಕಾಏಕಿ ಆಯುಧದಿಂದ ಹಲ್ಲೆ ಮಾಡಿದ್ದಾರೆ.
ಲಾಂಗ್ ಬೀಸಿದ್ದರಿಂದ ಶಾರಂತ್ ಕಣ್ಣಿನ ಉಬ್ಬು, ಬಾಯಿಗೆ ಗಂಭೀರ ಗಾಯವಾಗಿದೆ. ಆದರೆ, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗಾಯಾಳು ಶಾರಂತ್ಗೆ ಮಿಮ್ಸ್ ವೈದ್ಯರು 16 ಸ್ಟಿಚ್ ಹಾಕಿದ್ದಾರೆ.
ಈ ಹಿಂದೆ ಮಾದ ಅಲಿಯಾಸ್ ಮಾದಪ್ಪನನ್ನು ಬಾಸ್ ಎಂದು ಕರೆಯುವಂತೆ ಶಾರಂತ್ಗೆ ತಾಕೀತು ಮಾಡಿದ್ದರಂತೆ. ಆ ವೇಳೆ ಯಾವನ್ನೋ ಅವನು ಬಾಸ್ ಎಂದು ಶಾರಂತ್ ಟಾಂಗ್ ಕೊಟ್ಟಿದ್ದ. ಅಂದು ಗಲಾಟೆಯು ನಡೆದಿತ್ತು. ಆದರೆ, ಗಲಾಟೆ ತಕ್ಷಣವೇ ತಣ್ಣಗಾಗಿತ್ತು. ಆದರೆ, ಅದೇ ದ್ವೇಷ ಇಟ್ಟುಕೊಂಡು ಶಾರಂತ್ ಮೇಲೆ ಮಾದಪ್ಪ ಅಂಡ್ ಗ್ಯಾಂಗ್ ನಿನ್ನೆ ದಾಳಿ ಮಾಡಿದೆ.
ಶಾರಂತ್ ಬರ್ತಡೇ ದಿನವೇ ಕ್ಯಾತೆ ತೆಗೆದ ಮಾದನ ಗ್ಯಾಂಗ್ ಲಾಂಗ್ನಿಂದ ಗಂಭೀರವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪುಡಿರೌಡಿಗಳ ಬಂಧನಕ್ಕೆ ಮಂಡ್ಯ ಪೊಲೀಸರು ಬಲೆಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)