More

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ- ಶಾಮನೂರು ಶಿವಶಂಕರಪ್ಪ ಹೇಳಿಕೆ -ಸಿಎಂ ಸಿದ್ದರಾಮಯ್ಯ ಜನ್ಮ ದಿನಾಚರಣೆ

    ದಾವಣಗೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತದಾರರಿಗೆ ಹೇಳಿದರು.
    ಎಲ್.ಬಿ.ಕೆ. ಕಲ್ಯಾಣ ಟ್ರಸ್ಟ್‌ನಿಂದ ನಗರದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ರಾಜ್ಯದಲ್ಲಿ ಬಿಜೆಪಿ ದುರಾಡಳಿತ ಕೊನೆಗೊಳಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ. ಲೋಕಸಭಾ ಚುನಾವಣೆಯಲ್ಲೂ ಇದನ್ನು ಮುಂದುವರಿಸಿ, ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾಯಿಸಿ ಎಂದು ತಿಳಿಸಿದರು.
    ಬಿಜೆಪಿ ಆಡಳಿತ ಕೊನೆಗಾಣಿಸಲು ಕಾಂಗ್ರೆಸ್, 5 ಗ್ಯಾರಂಟಿ ಯೋಜನೆ ಘೋಷಿಸಿ ಅನುಷ್ಠಾನಗೊಳಿಸುವ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿದೆ. ಎಲ್ಲದಕ್ಕೂ ಟೀಕೆ ಮಾಡುತ್ತಿದ್ದ ಬಿಜೆಪಿಗೆ ಎದೆಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ ಎಂದು ತಿರುಗೇಟು ನೀಡಿದರು.
    ಬಿಜೆಪಿ ಕಾಲದ ಎಲ್ಲ ಹಗರಣಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಯಲಾಗುತ್ತಿವೆ. ನಗರದಲ್ಲಿ ಕುಂದುವಾಡ ಕೆರೆ ಅಭಿವೃದ್ಧಿಗೆ ನಾವು 2 ಕೋಟಿ ರೂ. ಖರ್ಚು ಮಾಡಿದ್ದೆವು. ಬಿಜೆಪಿಯವರು ಕೆರೆಯ ಹೂಳೆತ್ತಲು 15.50 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಹೇಳಿದ್ದಾರೆ. ಇದರಲ್ಲಿ ಎಷ್ಟು ಹಣ ಹೊಡೆದಿರಬಹುದು ಎಂದು ಪ್ರಶ್ನಿಸಿದರು.
    ಸರ್ಕಾರದಿಂದ ಹಿರೇಕೆರೂರಿನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು 250 ಎಕರೆ ಜಮೀನು ಖರೀದಿಸಿ ಅದು ಆಗದಿದ್ದ ಕಾರಣ ತಮ್ಮ ಹೆಸರಿಗೆ ಮಾಡಿಕೊಂಡವರು ನಗರದಲ್ಲಿದ್ದಾರೆ ಎಂದು ಸಂಸದರ ಹೆಸರು ಹೇಳದೆ ಟೀಕೆ ಮಾಡಿದರು.
    ಕಳೆದ ವರ್ಷ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ 10-15 ಲಕ್ಷ ಜನರು ಸೇರಿದ್ದರು. ಸಿದ್ದರಾಮಯ್ಯ ಅವರಂತಹ ಮುತ್ಸದ್ದಿಗಳು ಸಿಗುವುದು ಅಪರೂಪ. ದೇವರು ಅವರಿಗೆ ಆಯುಷ್ಯ, ಆರೋಗ್ಯ ದಯಪಾಲಿಸಲಿ ಎಂದು ಆಶಿಸಿದರು.
    ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷ್‌ಚಂದ್ರ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ದೇವರಾಜ ಅರಸು ನಂತರ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಕೊಟ್ಟ ಯೋಜನೆಗಳು ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದಿದೆ ಎಂದು ಹೇಳಿದರು.
    ಎಲ್.ಬಿ.ಕೆ. ಕಲ್ಯಾಣ ಟ್ರಸ್ಟ್ ಗೌರವಾಧ್ಯಕ್ಷ ಬಿ. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮಿದೇವಿ ಬಿ. ವೀರಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಇತರರು ಇದ್ದರು. ವಕೀಲ ಆಂಜನೇಯ ಗುರೂಜಿ ಸ್ವಾಗತಿಸಿದರು.
    ಇದೇ ಸಂದರ್ಭದಲ್ಲಿ ವಯೋವೃದ್ಧರಿಗೆ ಹೊದಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅಂಧ ಮಕ್ಕಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಿಹಿತಿನಿಸು ಹಾಗೂ ಹಣ್ಣು ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts