

ವಿಲಾಸ ಮೇಲಗಿರಿ ಬೆಂಗಳೂರು
ಒಳ ಮೀಸಲಾತಿ ಸಮೀಕ್ಷೆಗೆ ಸಾಲು ಸಾಲು ಸವಾಲು ಎದುರಾಗಿವೆ(Row after row of challenges to internal reservation survey). ರಾಜ್ಯ ಸರ್ಕಾರ ಅತ್ಯಂತ ಉತ್ಸುಕತೆಯಿಂದ ಸಮೀಕ್ಷೆಗೆ ಆದೇಶಿಸಿತ್ತಾದರೂ ಆರಂಭದಲ್ಲೇ ಸರ್ವರ್ ಸಮಸ್ಯೆಯಂತಹ ತಾಂತ್ರಿಕ ತೊಡಕು ಕಾಡಲಾರಂಭಿಸಿವೆ. ಹೀಗಾಗಿ ನೀಡಿರುವ ಮೇ 17 ಗಡುವಿನಲ್ಲಿ ಸಮೀಕ್ಷೆ ಮುಗಿಸುವುದು ಕಷ್ಟ ಎನ್ನಲಾಗುತ್ತಿದೆ.
ಪಾರದರ್ಶಕತೆ, ನಿಖರತೆ ತರುವ ಕಾರಣಕ್ಕೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ, ಅಪ್ಲಿಕೇಶನ್‌ನಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತಿವೆ. ಬೆಳಗ್ಗೆ 8.30ರಿಂದ ಸಂಜೆ 6.30ರವರೆಗಷ್ಟೇ ಸಮೀಕ್ಷೆಗೆ ಸಮಯ ನಿಗದಿಪಡಿಸಲಾಗಿದೆ. ಆದರೆ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಬೆಳಗ್ಗೆ ಲಾಗಿನ್ ಆಗಲು ಬೇಗ ಒಟಿಪಿಯೇ ಬರುತ್ತಿಲ್ಲ. ಬಂದರೂ ಲಾಗಿನ್ ಲೇಟ್ ಆಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ಸಾಮಾನ್ಯ ವರ್ಗದ ಸಮೀಕ್ಷೆಗೆ ಸಮಸ್ಯೆ ಇಲ್ಲ, ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ 42 ಪ್ರಶ್ನಾವಳಿಗೆ ಉತ್ತರ ಪಡೆದು ಮಾಹಿತಿ ಅಪ್‌ಲೋಡ್ ಮಾಡಬೇಕು. ಇದರಿಂದ ವಿಳಂಬವಾಗುತ್ತಿದೆ. ಕುಗ್ರಾಮಗಳಲ್ಲಿ ಇಂಟರ್‌ನೆಟ್ ಕಾಟ ಕಾಡುತ್ತಿದೆ. ಒಂದು ಕುಟುಂಬದ ಸಮೀಕ್ಷೆಗೆ ಅರ್ಧ ಗಂಟೆ, ಕೆಲವು ಸಮಯದಲ್ಲಿ ಒಂದು ಗಂಟೆ ಬೇಕಾಗಿದೆ. ಹೀಗಾಗಿ ದಿನಕ್ಕೆ 5-10 ಮನೆ ಸಮೀಕ್ಷೆಯಷ್ಟೇ ಸಾಧ್ಯವಾಗುತ್ತಿದೆ. ಸಮೀಕ್ಷೆಗೆ 100 ಕೋಟಿ ರೂ. ಖರ್ಚಾಗಬಹುದೆಂದು ಸರ್ಕಾರ ಅಂದಾಜಿಸಿದ್ದರೂ ಗಣತಿದಾರರಿಗೆ ಕೊಡುವ ಗೌರವಧನ ಎಷ್ಟು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ರಾಜ್ಯದ 56,696 ಮತಗಟ್ಟೆಗಳಲ್ಲಿ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಯುತ್ತಿದೆ. ಆದರೆ ಗಣತಿದಾರರಿಗೆ ಕೊಟ್ಟಿರುವ ತರಬೇತಿಗೂ ವಾಸ್ತವದಲ್ಲಿ ಮಾಡಿಸಲಾಗುತ್ತಿರುವ ಸಮೀಕ್ಷೆಗೂ ಸಾಕಷ್ಟು ವ್ಯತ್ಯಾಸವಿದೆ.
ಮತದಾರರ ಪಟ್ಟಿಯ ಅನುಸಾರ ಸಮೀಕ್ಷೆ ನಡೆಸಲು ನಿರ್ದೇಶಿಸಲಾಗಿದೆ. ಆದರೆ ಎಷ್ಟೋ ಕುಟುಂಬಗಳು ಹಳ್ಳಿ(ತಮ್ಮ ಮೂಲ ಸ್ಥಳ)ಗಳಲ್ಲಿ ಮತದಾನದ ಉದ್ದೇಶಕ್ಕಾಗಷ್ಟೇ ಹೆಸರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿರುವುದು ಸಮೀಕ್ಷೆ ಅಡ್ಡಿಯಾಗಿದೆ. ಜತೆಗೆ ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆ ಕಡೆ ಇರುವುದು ಸಮಸ್ಯೆ ಹೆಚ್ಚಿಸಿದೆ. ಬಹಳಷ್ಟು ವಾರ್ಡ್‌ಗಳಲ್ಲಿ 200ರಿಂದ 300 ಕುಟುಂಬಗಳಿದ್ದರೂ ಒಬ್ಬರೇ ಗಣತಿದಾರರನ್ನು ನೇಮಿಸಿ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿವೆ.
ಒಬ್ಬ ಗಣತಿದಾರನಿಗೆ ಸಹಾಯಕರನ್ನು ಕೊಡದೆ ಮಾಹಿತಿ ದಾಖಲಿಸಲು ಸೂಚಿಸಿರುವುದರಿಂದ ಕಷ್ಟವಾಗುತ್ತಿದೆ. ಆರಂಭದ ಎರಡು ದಿನ (ಮೇ 5, 6) ಆ್ಯಪ್ ತುಂಬಾ ಸತಾಯಿಸಿದೆ ಎಂಬುದು ಗಣತಿದಾರರ ಅಳಲು.
ಪ್ರತಿ ಮತಗಟ್ಟೆಗೆ ಒಬ್ಬ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಬೇರೆ ಬೇರೆ ಇಲಾಖೆ ನೌಕರರನ್ನು (ಉದಾ: ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು...ಇತ್ಯಾದಿ) ಮತಗಟ್ಟೆಗಳಲ್ಲಿ ಬಿಎಲ್‌ಒಗಳಾಗಿ ನೇಮಿಸಲಾಗಿತ್ತು. ಆದರೆ, ನ್ಯಾ.ಡಾ.ಎಚ್.ಎನ್. ನಾಗಮೋಹನ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ನಡೆಸುತ್ತಿರುವ ಸಮೀಕ್ಷೆಗೆ ಗಣತಿದಾರರನ್ನಾಗಿ ಶಿಕ್ಷಕರನ್ನು ಮಾತ್ರ ನೇಮಿಸಲಾಗಿದೆ. ಬಿಎಲ್ಒ ಅಲ್ಲದ ಶಿಕ್ಷಕರೂ ಸಮೀಕ್ಷೆಗೆ ಬಳಕೆಯಾಗಿದ್ದು, ಅವರಿಗೆ ವಾರ್ಡ್‌ಗಳ ಮಾಹಿತಿಯೇ ಇಲ್ಲ ಎಂಬುದು ಸಮೀಕ್ಷೆಗೆ ಇನ್ನೊಂದು ತೊಡಕಾಗಿದೆ.
ಅನೇಕ ಸಮಸ್ಯೆ ಹಾಗೂ ಸವಾಲುಗಳ ನಡುವೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗಣತಿ ಮುಗಿಸಿ ಕೊಡುವಂತೆ ಒತ್ತಡ ಹೇರುತ್ತಿರುವುದಷ್ಟೇ ಅಲ್ಲದೆ, ಮುಂದೆ ಆಗುವ ಆಗು-ಹೋಗುಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಎನ್ನುವ ಭಯ ಸೃಷ್ಟಿಸಿ ಮೇಲಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಮೂರು-ನಾಲ್ಕು ಅಂತಸ್ತು ಇರುವ ಬಹುತೇಕ ಮನೆಗಳಿಗೆ ಲ್‌ಟಿ ಇಲ್ಲ. ಹಾಗಾಗಿ 55 ವರ್ಷ ಮೀರಿದ ಗಣತಿದಾರರಿಗೆ ಮೆಟ್ಟಿಲು ಹತ್ತಿ ಇಳಿಯುವುದು ಕಷ್ಟವಾಗಿದೆ. ಆದ್ದರಿಂದ 55+ ವಯಸ್ಸಿನ ಶಿಕ್ಷಕರಿಗೆ ವಿನಾಯಿತಿ ನೀಡಬೇಕು ಎಂಬ ಒತ್ತಡವೂ ಸರ್ಕಾರದ ಮುಂದಿದೆ. ಸಮೀಕ್ಷೆಗೆ ಹೋದಾಗ ಗಣತಿದಾರರು ನಾಯಿಯಿಂದ ಕಚ್ಚಿಸಿಕೊಂಡಿರುವ ಉದಾಹರಣೆಗಳೂ ಉಂಟು. ಒಂದು ಕಡೆ ನಾಯಿ ಕಚ್ಚಿಸಿಕೊಂಡ ಶಿಕ್ಷಕರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚು ಮದ್ದೂ ಸಿಕ್ಕಿಲ್ಲ. ಚೇತರಿಸಿಕೊಳ್ಳಲು ರಜೆಯೂ ಸಿಕ್ಕಿಲ್ಲ.
ಸಮೀಕ್ಷೆಗೆ ತಾಂತ್ರಿಕ ಸಮಸ್ಯೆ ಇತ್ತು. ಶುಕ್ರವಾರ ಒಂದು ಲಕ್ಷ ಕುಟುಂಬಗಳ ಸಮೀಕ್ಷೆ ಮಾತ್ರ ನಡೆದಿತ್ತು. ಶನಿವಾರ ಸರಿಪಡಿಸಿದ್ದು, 2.05 ಲಕ್ಷ ಕುಟುಂಬಗಳ ಸಮೀಕ್ಷೆ ಆಗಿದೆ. ಈಗ ಸರ್ವರ್ ಸ್ಪೀಡ್ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷಾ ಪ್ರಗತಿ ಕಡಿಮೆಯಾಗಿದೆ. ಆ ಕುರಿತು ಪ್ರಗತಿ ಪರಿಶೀಲನೆ ನಡೆಸುತ್ತೇವೆ.
-ಡಾ.ರಾಕೇಶ್ ಕುಮಾರ್, ಆಯುಕ್ತ, ಸಮಾಜ ಕಲ್ಯಾಣ ಇಲಾಖೆ