

ಶಿವಮೊಗ್ಗ: ನಿರಂತರವಾಗಿ ಧಾರಣೆ ಏರಿಳಿತದ ನಡುವೆಯೇ ಸಾಗುತ್ತಿದ್ದ ಅಡಕೆ ಮಾರುಕಟ್ಟೆ ಈಗ ಕೊಂಚ ಸ್ಥಿರವಾಗಿದೆ. ಆದರೆ ಈ ಖುಷಿ ರೈತರ ಪಾಲಿಗೆ ಇಲ್ಲವಾಗಿದೆ. ಏಕೆಂದರೆ ಕಳೆದ ವರ್ಷದಂತೆ ಈ ವರ್ಷವೂ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಕೆಗೆ ಕೊಳೆ ರೋಗದ ಭೀತಿ ಎದುರಾಗಿದೆ.
ಅಪ್ಪಟ ಮಲೆನಾಡು ತಾಲೂಕುಗಳಾದ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ತಾಲೂಕಿನಲ್ಲಿ ನಿರಂತರ ಮಳೆಯಿಂದ ಕೊಳೆ ರೋಗ ಬಂದಿದೆ. ಮುಂಗಾರು ಆರಂಭವಾದಾಗಿನಿಂದ ಒಂದೇ ಸಮನೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಾತಾವರಣದಲ್ಲಿ ವಿಪರೀತ ತೇವಾಂಶವಿರುವುದು ಬೆಳೆಗಾರರ ನಿದ್ರೆಗೆಡಿಸಿದೆ.
ಬಹುತೇಕ ಕಡೆಗಳಲ್ಲಿ ಈಗಾಗಲೇ ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಿಸಿದ್ದಾರೆ. ಕೆಲವೆಡೆ ಎರಡನೇ ಬಾರಿ ಔಷಧ ಸಿಂಪಡಣೆಗೆ ಮಳೆ ಅವಕಾಶ ನೀಡಿಲ್ಲ. ಕೊಳೆಯ ಪ್ರಮಾಣವನ್ನು ಈಗಲೇ ಅಂದಾಜು ಮಾಡುವುದು ಕಷ್ಟ. ಕೊಳೆ ಬಂದರೂ ಎಲ್ಲ ಕಡೆಗಳಲ್ಲಿ ಕಾಯಿ ನೆಲಕ್ಕುದುರಲು ಇನ್ನೂ ಒಂದು ತಿಂಗಳು ಬೇಕು. ಈಗಾಗಲೇ ಅಲ್ಲಲ್ಲಿ ಕೊಳೆ ರೋಗದ ಮುನ್ಸೂಚನೆ ಸಿಗುತ್ತಿದೆ. ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಮಳೆ ಹಾಗೂ ಮೋಡದ ವಾತಾವರಣದಿಂದಾಗಿ ಅಡಕೆ ತೋಟದಲ್ಲಿನ ತೇವಾಂಶ ಕಡಿಮೆಯಾಗುತ್ತಿಲ್ಲ.
ತೇವಾಂಶ ಹೆಚ್ಚಿರುವುದರಿಂದ ಕೊಳೆ ರೋಗದ ಜತೆಗೆ ಎಲೆಚುಕ್ಕಿ ರೋಗ ಉಲ್ಬಣಿಸುವ ಸಾಧ್ಯತೆಗಳೂ ಇವೆ. ಇನ್ನೂ ಒಂದೆರಡು ತಿಂಗಳು ಹೆಚ್ಚಿನ ಅನಿಶ್ಚಿತತೆಯ ವಾತಾವರಣವಿದೆ. ಕೊಳೆ ಹಾಗೂ ಎಲೆಚುಕ್ಕಿ ರೋಗಕ್ಕೆ ಔಷಧ ಸಿಂಪರಣೆ ಮಾಡಿದರೂ ಅವು ನಿಯಂತ್ರಣಕ್ಕೆ ಬರುತ್ತಿಲ್ಲ. ಮಳೆ 10-15 ದಿನ ಬಿಡುವು ನೀಡಿ ಸೂರ್ಯ ದರ್ಶನವಾದರೆ ಮಾತ್ರ ಅಡಕೆ ಬೆಳೆಗಾರರ ಆತಂಕ ದೂರವಾಗಬಹುದು.