ದೇಹಾರೋಗ್ಯ, ಚರ್ಮದ ಆರೋಗ್ಯಕ್ಕೆ ಪೂರಕ ಗುಲಾಬಿ ದಳ

roj
Published on
 ದೇಹಾರೋಗ್ಯ, ಚರ್ಮದ ಆರೋಗ್ಯಕ್ಕೆ ಪೂರಕ ಗುಲಾಬಿ ದಳಬಿರು ಬೇಸಿಗೆಯಲ್ಲಿ ತಂಪು ನೀಡುವ ಮತ್ತು ನಮ್ಮ ದೇಹದ ಆರೋಗ್ಯವನ್ನು, ಅದರಲ್ಲೂ ವಿಶೇಷವಾಗಿ ಹೃದಯ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುವ ಗುಲಾಬಿ ಹೂವಿನ ಬಗ್ಗೆ ಇಂದು ತಿಳಿದುಕೊಳ್ಳೋಣ. ಆಯುರ್ವೆದ ಗ್ರಂಥಗಳಲ್ಲಿ ಗುಲಾಬಿ ಹೂವಿನ ಬಗ್ಗೆ ಹೇಳುವಾಗ ಮಹಾಕುಮಾರಿ, ತರುಣಿ ಎಂದೆಲ್ಲಹೇಳಿದ್ದಾರೆ.

ಅಂದರೆ ಇದನ್ನು ಬಳಸುವುದರಿಂದ ಲೋಳೆಸರ (ಅಲೊವೆರಾ)ದಿಂದ ಚರ್ಮದ ಆರೋಗ್ಯ ಹೇಗೆ ಹೆಚ್ಚಾಗುತ್ತ ದೆಯೋ ಅದಕ್ಕಿಂತಲೂ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಚರ್ಮಕ್ಕೆ ಅನುಕೂಲಕರ ಎಂದು ನಾವು ಅರ್ಥಮಾಡಿಕೊಳ್ಳಬಹುದು. ಇದಕ್ಕೆ ಸ್ನಿಗ್ಧ ಗುಣ ಇದ್ದು, ರುಚಿ ಸಿಹಿಯಾಗಿದ್ದು, ಜೀರ್ಣಕ್ರಿಯೆಗೆ ಲಘುವಾಗಿದೆ. ತಂಪು ಗುಣವನ್ನು ಕೂಡ ಹೊಂದಿದೆ. ಹೀಗಾಗಿ ಇದು ವಾತ, ಪಿತ್ತ, ಕಫ ಮೂರೂ ದೋಷಗಳನ್ನು ನಿಯಂತ್ರಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಆಯುರ್ವೆದ ಗ್ರಂಥಗಳು ಇದನ್ನು ಹೃದ್ಯ ಎಂದು ಕರೆದಿದ್ದಾರೆ. ಅಂದರೆ ಹೃದಯದ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎಂದರ್ಥ.

ಔಷಧೀಯ ಗುಣಗಳು: ವಿಶೇಷವಾಗಿ ದೇಹದಲ್ಲಿ ಪಿತ್ತ ಹೆಚ್ಚಾಗಿ ಉಷ್ಣತೆಯ ಕಾರಣದಿಂದ ಹೊಟ್ಟೆಯಲ್ಲಿ ಉರಿ, ಹಸ್ತ, ಪಾದ, ತಲೆಯಲ್ಲಿ ಉರಿ, ಮಾನಸಿಕವಾಗಿ ಕಿರಿಕಿರಿ ಅನ್ನಿಸುವುದು ಮುಂತಾದ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ಇದು ತುಂಬಾ ಅನುಕೂಲಕರ. ಕೈಯದೇವ ನಿಘಂಟುವಿನಲ್ಲಿ ರ್ವ್ಯಣ ಎಂದು ಕರೆದಿದ್ದಾರೆ. ಅಂದರೆ ಇದು ನಮ್ಮ ಚರ್ಮದ ಬಣ್ಣವನ್ನು ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರ್ಥ. ಉಷ್ಣದ ಕಾರಣದಿಂದ ಮತ್ತು ಪಿತ್ತ ದೋಷದ ಕಾರಣದಿಂದ ಪದೇ ಪದೇ ಭೇದಿ ಆಗುತ್ತಿದ್ದರೆ ಅಂತಹ ಸಮಸ್ಯೆಗಳಲ್ಲಿ ಕೂಡ ತುಂಬಾ ಅನುಕೂಲಕರವಾದದ್ದು. ಇದರ ತಂಪು ಗುಣದ ಕಾರಣದಿಂದ ಇದು ಅಸಿಡಿಟಿ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಹೊಟ್ಟೆಯಲ್ಲಿ ಉರಿ ಮತ್ತು ಸಂಕಟದ ಅನುಭವ ಆಗುತ್ತಿರುವವರಿಗೆ ಅನುಕೂಲಕರವಾದದ್ದು. ಪದೇ ಪದೇ ಬಾಯಿ ಹುಣ್ಣು ಆಗುತ್ತಿರುವವರು 15 ದಿನಗಳ ಕಾಲ ನಿತ್ಯವೂ ಸೇವಿಸುತ್ತಿದ್ದರೆ ಬಾಯಿ ಹುಣ್ಣು ಗುಣವಾಗುತ್ತದೆ ಮತ್ತು ಪದೇ ಪದೇ ಆಗುವುದು ಕಡಿಮೆಯಾಗುತ್ತದೆ. ಕಣ್ಣು ಉರಿ, ಕಣ್ಣಲ್ಲಿ ಅತಿಯಾಗಿ ನೀರು ಬರುವುದು, ಕಣ್ಣಿನ ದೃಷ್ಟಿ ಮಂದವಾಗುವುದು ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಇದನ್ನು ಆಗಾಗ ಸೇವಿಸುತ್ತಿದ್ದರೆ ಆ ತೊಂದರೆಗಳು ಕಡಿಮೆಯಾಗುತ್ತವೆ. ಕೇವಲ ಹೃದಯಕ್ಕೆ ಮಾತ್ರವಲ್ಲ ಮನಸ್ಸಿನ ಶಕ್ತಿಯನ್ನು ಕೂಡಾ ಇದು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಖಿನ್ನತೆ ಮತ್ತು ಉದ್ವೇಗದಂತಹ ತೊಂದರೆಗಳನ್ನು ಅನುಭವಿಸುತ್ತಿರುವವರು ಸೇವಿಸಬಹುದು.

ಧಾತು ಪೋಷಣೆ: ಇದು ಧಾತು ಪೋಷಣೆಯನ್ನುಮಾಡುತ್ತದೆ; ವಿಶೇಷವಾಗಿ ರಕ್ತ ಮತ್ತು ಶುಕ್ರ ಧಾತುವಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಹೆಚ್ಚು ಅನುಕೂಲಕರ. ಮುಟ್ಟಿನ ಸಮಯದಲ್ಲಿ ಅತಿಯಾಗಿ ರಕ್ತಸ್ರಾವ ಆಗುತ್ತಿದ್ದರೆ ಅಂಥವರಿಗೆ ಇದು ತುಂಬಾ ಅನುಕೂಲಕರ. ಚರ್ಮದ ಸೌಂದರ್ಯವೃದ್ಧಿಗೆ ಪ್ರಯತ್ನಿಸುತ್ತಿ ರುವವರು ಇದನ್ನು ನಿತ್ಯವೂ ಸೇವಿಸಬಹುದು.

ಬಳಸುವುದು ಹೇಗೆ?: ದಿನಕೊಮ್ಮೆ ಆಹಾರದ ಮೊದಲು ಎಂಟರಿಂದ ಹತ್ತರಷ್ಟು ತಾಜಾ ಹೂವಿನ ದಳಗಳನ್ನು ಹಾಲಿನ ಜೊತೆ ಸೇವಿಸಿದರೆ ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳಲ್ಲಿ ತುಂಬಾ ಅನುಕೂಲವಾಗುತ್ತದೆ.

ಮನೆಯಲ್ಲಿ ಹೂವಿನ ಗಿಡಗಳು ಇಲ್ಲದಿದ್ದರೆ ಹೂವು ಸಿಕ್ಕಾಗ ಅದರ ಎಸಳುಗಳನ್ನು ನೆರಳಿನಲ್ಲಿ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟುಕೊಂಡು ಸೇವಿಸಬಹುದು. ಆದರೆ ಇದು ತಾಜಾ ಹೂವಿನಷ್ಟು ಪರಿಣಾಮಕಾರಿಯಲ್ಲ. ತಾಜಾ ಹೂವಿನ ದಳಗಳನ್ನು ಜಜ್ಜಿ ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಸಾಧ್ಯವಾಗದಿದ್ದರೆ ಒಣಗಿದ ಎಸಳುಗಳ ಪುಡಿಯನ್ನು ಮಾಡಿ ಅದನ್ನು ಹಾಲಿನಲ್ಲಿ ಕಲಸಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net