

ಬೇಲೂರು: ಬುಧವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ತಾಲೂಕಿನ ದಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಸೋಮನಹಳ್ಳಿ ಗ್ರಾಮದಲ್ಲಿ ವಾಸದ ಮನೆ ಹಾಗೂ ಕೊಟ್ಟಿಗೆಯ ಛಾವಣಿ ಹಾರಿ ಹೋಗಿದ್ದು, ಸ್ಥಳಕ್ಕೆ ತಹಸೀಲ್ದಾರ್ ಎಂ.ಮಮತಾ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಮನೆಯ ಮಾಲೀಕ ದಿನೇಶ್ ಮಾತನಾಡಿ, ಬುಧವಾರ ಸಂಜೆ ದನ-ಕರುಗಳನ್ನು ಕೊಟ್ಟಿಗೆಗೆ ಕಟ್ಟುವ ಸಂದರ್ಭ ಭಾರಿ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು. ಅಷ್ಟರಲ್ಲಿ ಜೋರಾದ ಗಾಳಿಗೆ ನೋಡ ನೋಡುತ್ತಿದ್ದಂತೆ ನಮ್ಮ ಮನೆಯ ಛಾವಣಿ ದೂರಕ್ಕೆ ಹಾರಿ ಬಿದ್ದಿದೆ. ಇದರಿಂದ ಮನೆಯಲ್ಲಿದ್ದ ಧವಸ ದಾನ್ಯ ನೀರಿನಿಂದ ನೆನೆದು ಹಾಳಾಗಿದೆ. ಜತೆಗೆ ಕೊಟ್ಟಿಗೆಯಲ್ಲಿದ್ದ ಹಸುವಿನ ಕೊಂಬು ಮುರಿದಿದ್ದು, ಸಾಕಷ್ಟು ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಪಂ ಸದಸ್ಯ ಪಟೇಲ್ ನಾಗೇಶ್ ಮಾತನಾಡಿ, ದಿನೇಶ್ ಬಿನ್ ಗುಂಡೇಗೌಡರಿಗೆ ಸೇರಿದ ವಾಸದ ಮನೆ, ದನದ ಕೊಟ್ಟಿಗೆಯೂ ಗಾಳಿ ಮಳೆಗೆ ಸಿಲುಕಿ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ತಮ್ಮನ ಮನೆಗೆ ಹೋಗಿದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆಯಲ್ಲಿದ್ದ ವಸ್ತುಗಳು ನೀರಿನಿಂದ ತೇವಗೊಂಡಿದ್ದರಿಂದ ಸಾಕಷ್ಟು ನಷ್ಟವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಆಗಿರುವ ನಷ್ಟಕ್ಕೆ ಪರಿಹಾರ ನೀಡುವುದಕ್ಕೆ ಗಮನ ಹರಿಸಬೇಕು ಎಂದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಎಂ.ಮಮತಾ. ಸ್ಥಳ ಪರಿಶೀಲಿಸಿ ಗಾಳಿ ಮಳೆಯಿಂದಾಗಿ ಏನೇನು ಹಾನಿಯಾಗಿದೆ ಎಂಬುದನ್ನು ತಿಳಿದು ಕೊಂಡರಲ್ಲದೆ, ತಮ್ಮ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನೆಯ ದಾಖಲೆಗಳನ್ನು ಕೊಡುವಂತೆ ಸೂಚಿಸಿದರು. ಗ್ರಾಮಸ್ಥರಾದ ಸೊಮೇಗೌಡ, ಅಶೋಕ್, ತೀರ್ಥೇಶ್, ಯದುನಂದನ್, ಗ್ರಾಪಂ ಪಿಡಿಒ ಸಂತೋಷ್ ಇದ್ದರು.