ಕೊನೆಗೂ ಕಾಮುಕರ ಕೊರಳಿಗೆ ಉರುಳು: ನಿರ್ಭಯಾಗೆ ನ್ಯಾಯ

nirbhaya 20 mar 20
Published on

ಸುದೀರ್ಘ ಏಳು ವರ್ಷಗಳ ಕಾನೂನು ಹೋರಾಟ ಬಳಿಕ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಸುದ್ದಿ ಹೊರಬೀಳುತ್ತಿದ್ದಂತೆ ತಿಹಾರ್ ಜೈಲಿನ ಎದುರು ನೂರಾರು ಜನರು ಸೇರಿ ಹಷೋದ್ಗಾರ ಮೊಳಗಿಸಿದರು.

ನವದೆಹಲಿ: ದೇಶದ ತುಂಬ ಪ್ರತಿಭಟನೆ ಕಿಚ್ಚು ಹೊತ್ತಿಸಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣ ನಡೆದ ಏಳು ವರ್ಷಗಳ ಬಳಿಕ ಹಂತಕರನ್ನು ನೇಣಿನ ಕುಣಿಕೆಗೆ ಏರಿಸಲಾಗಿದೆ.

ಸಂತ್ರಸ್ತೆಯ ತಾಯಿ ನಡೆಸಿದ ನಿರಂತರ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ನಿರ್ಭಯಾ ಸಾವಿಗೆ ಕಂಬನಿ ಮಿಡಿದಿದ್ದ ಇಡೀ ದೇಶ ಅಪರಾಧಿಗಳ ನೇಣಿನಿಂದ ಸಂಭ್ರಮ ಆಚರಿಸಿದೆ. ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ನಾಲ್ಕನೇ ಡೆತ್ ವಾರಂಟ್ ಪ್ರಕಾರ, ಶುಕ್ರವಾರ ಬೆಳಗ್ಗೆ 5.30ಕ್ಕೆ ಅಪರಾಧಿಗಳಾದ ಮುಕೇಶ್ ಸಿಂಗ್, ವಿನಯ್ ಶರ್ವ, ಅಕ್ಷಯ್ ಠಾಕೂರ್ ಹಾಗೂ ಪವನ್ ಗುಪ್ತಾನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗಿದೆ.

ಗಲ್ಲಿಗೇರಿಸುವ ಎರಡು ತಾಸು ಮುಂಚಿನವರೆಗೂ ಅಪರಾಧಿಗಳ ಪರ ವಕೀಲರು ಗಲ್ಲುಶಿಕ್ಷೆ ತಡೆಯಲು ಶತ ಪ್ರಯತ್ನಗಳನ್ನು ನಡೆಸಿದರು. ಗಲ್ಲುಶಿಕ್ಷೆಗೆ ತಡೆಕೋರಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದರು. ರಾತ್ರಿ 12.30ರವರೆಗೂ ಈ ಕುರಿತು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ವಾದ ಮಂಡಿಸಿದ ವಕೀಲ ಸಿಂಗ್, ಮಾನವ ಹಕ್ಕುಗಳ ಆಯೋಗದಲ್ಲಿ ಅಪರಾಧಿಗಳ ಅರ್ಜಿ ಇನ್ನೂ ಬಾಕಿ ಇದೆ. ಅಲ್ಲದೆ ಅಕ್ಷಯ್ ಕುಮಾರ್ ಪತ್ನಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯೂ ಬಾಕಿ ಇದೆ. ಹಲವು ಅರ್ಜಿಗಳು ಬಾಕಿ ಇರುವಾಗ ಅಪರಾಧಿಗಳನ್ನು ಹೇಗೆ ನೀವು ಗಲ್ಲಿಗೆ ಹಾಕುತ್ತೀರಿ? ಎಂದು ಪ್ರಶ್ನಿಸಿದರು. ಸಾಂರ್ದಭಿಕವಲ್ಲದ ಅಂಶಗಳನ್ನಿಟ್ಟುಕೊಂಡು ಗಲ್ಲುಶಿಕ್ಷೆಗೆ ತಡೆಕೋರುತ್ತಿದ್ದ ವಕೀಲರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, ‘ನೀವು ಯಾವುದೇ ಮುಖ್ಯವಾದ ಅಂಶವನ್ನೂ ಎತ್ತುತ್ತಿಲ್ಲ. ಇನ್ನು ಕೆಲವೇ ತಾಸಿನಲ್ಲಿ ನಿಮ್ಮ ಕಕ್ಷಿದಾರರು ದೇವರ ಸನಿಹಕ್ಕೆ ತೆರಳುತ್ತಾರೆ. ನೀವು ಕೋರ್ಟ್ ಸಮಯ ಹಾಳು ಮಾಡುತ್ತಿದ್ದೀರಿ’. ಅಕ್ಷಯ್ ಪತ್ನಿ ಸಲ್ಲಿಸಿರುವ ವಿಚ್ಛೇದನಾ ಅರ್ಜಿ ಪ್ರಸ್ತುತವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಎಲ್ಲವೂ ಮುಗಿದಿದೆ. ಈಗಾಗಲೇ ನಾಲ್ಕು ಡೆತ್ ವಾರಂಟ್ ಹೊರಡಿಸಲಾಗಿದೆ. ಅವುಗಳಿಗೂ ಸ್ವಲ್ಪ ಪಾವಿತ್ರ್ಯತೆ ನೀಡಬೇಕು ಎಂದು ಅರ್ಜಿ ತಿರಸ್ಕರಿಸಿತು. ಇದಾದ ಬಳಿಕ ಪವನ್ ಗುಪ್ತಾ ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ರಾತ್ರಿ 2.30ಕ್ಕೆ ವಿಚಾರಣೆಗೆತ್ತಿಕೊಂಡಿತು. ಅಲ್ಲೂ ಅಪರಾಧಿಗಳ ಪರ ವಕೀಲರು ಗಲ್ಲು ಶಿಕ್ಷಗೆ ತಡೆ ಕೋರಿ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್. ಬೋಪಣ್ಣ ನೇತೃತ್ವದ ಪೀಠ 3.30ರ ಸುಮಾರಿಗೆ ಅರ್ಜಿ ವಜಾಗೊಳಿಸಿ ಆದೇಶಿಸಿತು. ಈ ಮೂಲಕ ನಿರ್ಭಯಾ ಅಪರಾಧಿಗಳು ಸಲ್ಲಿಸಿದ್ದ ಎಲ್ಲ ಅರ್ಜಿಗಳು ಗಲ್ಲು ಶಿಕ್ಷೆ ಜಾರಿಗೆ 2 ತಾಸುಗಳಿರುವಾಗ ವಜಾಗೊಂಡವು.

ನ್ಯಾಯಕ್ಕಾಗಿ 7 ವರ್ಷ ಹೋರಾಟ

ನಿರ್ಭಯಾ ಪ್ರಕರಣಕ್ಕೆ ನ್ಯಾಯ ಒದಗಿಸುವಲ್ಲಿ ಸಂತ್ರಸ್ತೆಯ ತಾಯಿ ಜತೆ ಕಳೆದ 7 ವರ್ಷದಿಂದ ಕಾನೂನು ಹೋರಾಟ ನಡೆಸಿದವರು ವಕೀಲೆ ಸೀಮಾ ಕುಶ್ವಾಹ. ಉತ್ತರಪ್ರದೇಶ ಮೂಲದ ಸೀಮಾ, ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದ್ದರು. ಐಐಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಂಡು ತರಬೇತಿ ಪಡೆಯಲು ಸಿದ್ಧರಾಗಿದ್ದ ಸೀಮಾ ನಂತರ ವಕೀಲಿ ವೃತ್ತಿಗೆ ಬಂದಿದ್ದರು. 2012ರಲ್ಲಿ ನಿರ್ಭಯಾ ಘಟನೆ ನಡೆದಾಗ ಸೀಮಾ ಕೋರ್ಟ್​ನಲ್ಲಿ ತರಬೇತಿ ಪಡೆಯುತ್ತಿದ್ದರು. ನಿರ್ಭಯಾ ಪ್ರಕರಣದ ಬಗ್ಗೆ ತಿಳಿಯುತ್ತಿದ್ದಂತೆ ಸೀಮಾ ಈ ಕೇಸನ್ನು ತಾನೇ ನಿರ್ವಹಿಸುತ್ತೇನೆ ಮತ್ತು ಇದಕ್ಕೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ಘೋಷಿಸಿದರು. ಇದು ಅವರ ವೃತ್ತಿ ಜೀವನದ ಮೊದಲ ಪ್ರಕರಣವೂ ಹೌದು. ಪೂರ್ತಿ ಶ್ರಮವಹಿಸಿ ಸತತ 7 ವರ್ಷಗಳ ಕಾಲ ಕೋರ್ಟ್​ನಲ್ಲಿ ಹೋರಾಡಿದ ಸೀಮಾ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿಗೆ ನ್ಯಾಯ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ವಿಚಾರಣಾ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್​ವರೆಗೂ ನಿರ್ಭಯಾ ಪ್ರಕರಣದ ಪರ ವಾದಿಸಿದ ಸೀಮಾ, ಕೋರ್ಟ್ ಹೊರಗೆಯೂ ಕೂಡ ನಿರ್ಭಯಾ ತಂದೆ-ತಾಯಿಗೆ ಬಲ ನೀಡುವಲ್ಲಿ ಮುಖ್ಯವಾಗಿದ್ದರು. ನಿರ್ಭಯಾ ತಾಯಿ ಕೂಡ ಸೀಮಾ ಬಗ್ಗೆ ಅಷ್ಟೇ ನಂಬಿಕೆ ಇರಿಸಿ ನ್ಯಾಯಕ್ಕಾಗಿ ಕಾಯುತ್ತಿದ್ದರು.

ಅಪರಾಧಿಗಳ ಕೊನೆಯಾಸೆ ಏನು?

ಗಲ್ಲಿಗೇರಿಸುವ ಕೆಲ ನಿಮಿಷಗಳ ಮುಂಚೆ ಕೊನೆ ಆಸೆ ಕೇಳಿದಾಗ ನಾಲ್ವರಲ್ಲಿ ಯಾವೊಬ್ಬ ಅಪರಾಧಿಯೂ ಆಸ್ತಿ ವಿಲ್ ಮಾಡುವ ಕುರಿತು ಅಥವಾ ಯಾವುದೇ ಅಂತಿಮ ಇಚ್ಛೆ ವ್ಯಕ್ತಪಡಿಸಲಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ವೇಳೆ ಮುಕೇಶ್ ಸಿಂಗ್ ತನ್ನ ಅಂಗಾಂಗ ದಾನ ಮಾಡುವಂತೆ ಮನವಿ ಮಾಡಿದ್ದ ಎಂದು ತಿಳಿದುಬಂದಿದೆ. ವಿನಯ್ ಶರ್ಮಾ ತಾನು ಜೈಲಿನಲ್ಲಿದ್ದಾಗ ಬಿಡಿಸಿದ್ದ ಪೇಂಟಿಂಗ್​ಗಳನ್ನು ಜೈಲು ಅಧೀಕ್ಷಕರಿಗೆ ನೀಡಿದ್ದಾನೆ. ಜತೆಗೆ ತನ್ನ ಬಳಿ ಇದ್ದ ಹನುಮಾನ್ ಚಾಲೀಸಾವನ್ನು ತನ್ನ ಕುಟುಂಬಕ್ಕೆ ನೀಡಿ ಎಂದು ತಿಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net