ಮಾನವ ಅಭಿವೃದ್ಧಿಯಲ್ಲಿ ವಾಸ್ತುಶಿಲ್ಪ, ಶಿಕ್ಷಣದ ಪಾತ್ರ

ವಿಜಯವಾಣಿ (4)
Published on
ಇಂದಿನ ದಿನಮಾನಗಳಲ್ಲಿ ವಾಸ್ತುಶಿಲ್ಪವನ್ನು ಮುಖ್ಯವಾಗಿ ಒಂದು ಶೈಲಿಯಾಗಿ (ಸ್ಟೈಲ್) ಪರಿಗಣಿಸಲಾಗುತ್ತದೆ. ವಿನ್ಯಾಸ ಅಥವಾ ಯೋಜನೆಯು ಸ್ಥಳ, ಬಣ್ಣ, ಗ್ರಾಫಿಕ್ ವಿನ್ಯಾಸ ಮತ್ತು ನಾನಾ ನಿರ್ಮಾಣ ವಸ್ತುಗಳೊಂದಿಗೆ ಒಂದು ಆಟವಾಗಿದೆ. ಸೌಂದರ್ಯದೊಂದಿಗೆ ಆಕ್ಟಿವಿಟಿ ಕಾನ್ಪಿಗರೇಶನ್ ಸ್ಪೇಸಸ್​ನ ಜೋಡಣೆಯಾಗಿ ಪರಿಣಮಿಸಿದೆ. ಕಟ್ಟಡವೊಂದು ಭೂಮಿಯ ಮೇಲಿನ ಒಂದು ಪ್ರದರ್ಶನ ವಸ್ತು (ಶೋ ಪೀಸ್) ಮಾತ್ರವಲ್ಲ; ಅದು ಕೌಟುಂಬಿಕ ಪರಿಸರದ ಆಶ್ರಯ ತಾಣವಾಗಿರುತ್ತದೆ.

ಇಂದಿನ ಮಾನವ ಪ್ರಕೃತಿಯಿಂದ ಲಭ್ಯವಾಗುವ ನೈಸರ್ಗಿಕ ಶಕ್ತಿವರ್ಧಕ ವಿಟಮಿನ್​ಗಳ ಅಗತ್ಯ ಪ್ರಮಾಣವನ್ನು ಪಡೆಯುತ್ತಿಲ್ಲ. ನಾಗರಿಕತೆಯ ಕಾಲದಿಂದಲೂ ಮಾನವರು ಛಾವಣಿ ಸಹಿತ ನಾಲ್ಕೂ ದಿಕ್ಕುಗಳಿಂದ ಮುಚ್ಚಿದ ಸ್ವಯಂ-ಹೇರಿಕೆಯ ಆಶ್ರಯತಾಣಕ್ಕೆ ಬಂದಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಮಾನವ ಜೀವನದ ಬಗ್ಗೆ ಆಳವಾದ ಅಧ್ಯಯನ ನಡೆಸಿದರೆ, ವಿಶೇಷವಾಗಿ ಕಾಡುಗಳ ಸಹಿತ ಮುಕ್ತ ಪರಿಸರದಲ್ಲಿ ವಾಸಿಸುವ ಪ್ರಾಣಿಗಳಿಗೆ ಹೋಲಿಸಿದರೆ ಮಾನವ ತನ್ನ ವರ್ತನೆಯ ವಿಧಾನಗಳಲ್ಲಿ ಸಾಕಷ್ಟು ಅಸಮತೋಲನ ಅನುಭವಿಸುತ್ತಿರುವುದು ಗೋಚರವಾಗುತ್ತದೆ.

ನಾವು ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ ಸ್ಥಳ ಮತ್ತು ಅಥವಾ ಜಾಗಗಳನ್ನು (ಪ್ಲೇಸ್ ಆಂಡ್ ಸ್ಪೇಸ್) ಜನರು ಯಾಕೆ ಬಳಸುವುದಿಲ್ಲ ಅಥವಾ ಆ ವಿಚಾರದಲ್ಲಿ ಹಾದಿ ತಪ್ಪುತ್ತಾರೆ ಎನ್ನುವುದು ವಾಸ್ತುಶಿಲ್ಪಿಗಳು ಮತ್ತು ಯೋಜಕರು ಪ್ರಶ್ನಿಸುವುದನ್ನು ನಾವು ಕೇಳಬಹುದಾಗಿದೆ. ಇನ್ನೊಂದೆಡೆ, ವಾಸ್ತುತಜ್ಞರು ಅಥವಾ ಯೋಜಕರು ತಮ್ಮ ಮಂಡನೆಯಲ್ಲಿ ಮತ್ತು ನಮ್ಮ ಬದುಕಿನ ನಿರೀಕ್ಷೆಯ ಕುರಿತು ಯಾಕಿಷ್ಟು ಸಂವೇದನಾರಹಿತರಾಗಿರುತ್ತಾರೆ ಎಂದು ಜನರು ಪ್ರಶ್ನಿಸುವುದನ್ನೂ ನಾವು ನೋಡುತ್ತೇವೆ. ನಾವು ಮಹತ್ವದ್ದೆಂದು ಪರಿಗಣಿಸುವ ವಿಚಾರವನ್ನು ವಾಸ್ತುಶಿಲ್ಪಿಗಳು ಬಿಟ್ಟುಬಿಡುವುದೇಕೆ ಎಂಬುದೂ ಜನರ ಪ್ರಶ್ನೆಯಾಗಿರುತ್ತದೆ. ವಾಸ್ತುಶಿಲ್ಪದ ವಿದ್ಯಾರ್ಥಿ ಪಡೆಯುವ ಮೂಲಭೂತ ಶಿಕ್ಷಣ ಅದಕ್ಕೆ ಮುಖ್ಯ ಕಾರಣವಾಗಿದೆ. ಮಾನವ ವಾಸದ ನಾನಾ ಉದ್ದೇಶಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಚ್ಚು ಹೊಂದಿಕೊಳ್ಳುವ, ಸ್ಥಳಾವಕಾಶ ಮತ್ತು ಕಾರ್ಯನಿರ್ವಹಿಸಬಲ್ಲ (ಫಂಕ್ಷನಲ್) ಉತ್ತಮವಾಗಿ ಯೋಜಿಸಿದ ಭೌತಿಕ ಪರಿಸರ ಸ್ಥಳಗಳನ್ನು ಸೃಷ್ಟಿಸಬಲ್ಲ ಹಾಗೂ ಯೋಜಿಸಬಲ್ಲ ಅರ್ಹ ಮತ್ತು ಅನುಭವಿ ವೃತ್ತಿಪರರು ಸಮಾಜಕ್ಕೆ ಬೇಕಾಗಿದ್ದಾರೆ.

ಪವಿತ್ರ ವಾಸ್ತುಶಿಲ್ಪ ಎಂದರೇನು?: ಪವಿತ್ರ=ಪವಿ+ತ್ರ=ಬೆಳಕಿನ ಸ್ಥಳ. ಬೆಳಕು ಒಂದು ಶಕ್ತಿಯಾಗಿದೆ. ಪ್ರಕೃತಿಯಲ್ಲಿ ಶಕ್ತಿ ಯಾವಾಗಲೂ ಶುದ್ಧವಾಗಿರುತ್ತದೆ. ಆದ್ದರಿಂದ ಜಗತ್ತಿಗೆ ಶುದ್ಧ ಮತ್ತು ಶಕ್ತಿಯುತ ವಾಸ್ತುಶಿಲ್ಪದ ಅಗತ್ಯವಿದೆ. ಭಾರತೀಯ ಪುರಾಣದಲ್ಲಿ ಉಲ್ಲೇಖಿಸಲಾದ ‘ರಾಮರಾಜ್ಯ’ ‘ಪವಿತ್ರ ವಾಸ್ತುಶಿಲ್ಪ’ಕ್ಕೆ ಅದ್ಭುತ ಉದಾಹರಣೆಯಾಗಿದೆ. ಪಾವಿತ್ರ್ಯ ಎನ್ನುವುದು ದೇವಸ್ಥಾನ, ಮಠ, ಚರ್ಚ್ ಅಥವಾ ಮಸೀದಿಗಳಲ್ಲಿ ಮಾತ್ರವೇ ಸಿಗುವಂಥದ್ದಲ್ಲ. ಮನುಷ್ಯನಿಗೆ ಮೊದಲು ಅಗತ್ಯವಾಗಿರುವುದು ಆಶ್ರಯ. ಆದ್ದರಿಂದ ಪಾವಿತ್ರ್ಯವು ಸಣ್ಣ ಆಶ್ರಯದಿಂದ ಹಿಡಿದು ದೊಡ್ಡ ಕಟ್ಟಡಗಳು ಮತ್ತು ಕ್ಯಾಂಪಸ್​ಗಳಿಂದ ಆರಂಭವಾಗುತ್ತದೆ.

ವಾಸ್ತುಶಿಲ್ಪವು ಕೆಲವು ಆಂತರಿಕ ಮತ್ತು ಬಾಹ್ಯ ಸೌಂದರ್ಯಗಳ ಅಂಶಗಳೊಂದಿಗೆ ಅಗತ್ಯವಾದ ಸ್ಥಳಗಳ ಚಟುವಟಿಕೆಗಳ ಜೋಡಣೆಯ ಯೋಜನೆ ಮತ್ತು ವಿನ್ಯಾಸದ ಸೃಷ್ಟಿಯಷ್ಟೇ ಅಲ್ಲ. ಮಾನವನ ಮೂಲಭೂತ ಗುಣಗಳಾದ ರಜಸ್, ತಮಸ್ ಮತ್ತು ಸತ್ವಗಳನ್ನು ಸಂಪ್ರೀತಗೊಳಿಸುವುದಕ್ಕೆ ಅಗತ್ಯವಾದ ಪೂರಕ ಹಾಗೂ ಪವಿತ್ರ ಪಾರಿಸರಿಕ ಸ್ಥಳಾವಕಾಶವನ್ನು ಸೃಷ್ಟಿಸುವುದೇ ವಾಸ್ತುಶಿಲ್ಪ. ಪ್ರಾಚೀನ ಭಾರತೀಯ ವಾಸ್ತುಶಾಸ್ತ್ರದ ತತ್ವಗಳನ್ನು (ಪಾಶ್ಚಿಮಾತ್ಯ ಶಿಕ್ಷಣದ ಹೆಸರಿನಲ್ಲಿ) ಬೊಧನೆ ಮತ್ತು ಆಚರಣೆಯಲ್ಲಿ ಮರೆಯಲಾಗಿದೆ ಅಥವಾ ನಿರ್ಲಕ್ಷಿಸಲಾಗಿದೆ. ಇದರಿಂದಾಗಿ ಸಮಾಜದ ಆರೋಗ್ಯ, ಸಂಪತ್ತು ಮತ್ತು ವಿವೇಕದ ವಿಚಾರಗಳಲ್ಲಿ ಅಸಮತೋಲನ ಉಂಟಾಗಿದೆ. ಆದ್ದರಿಂದ ‘ಪಾವಿತ್ರ್ಯತೆ, ಪ್ರಶಾಂತತೆ ಮತ್ತು ಶುದ್ಧತೆ’ ವಿಚಾರಗಳಲ್ಲಿ ಪವಿತ್ರ ವಾಸ್ತುಶಿಲ್ಪವನ್ನು ಸೃಷ್ಟಿಸುವುದು ತುಂಬ ಅಗತ್ಯವಾಗಿದೆ.

ವಾಸ್ತುಶಿಲ್ಪಿಯು ಎಲ್ಲ ಕಲೆಗಳಲ್ಲಿ (ವಿಜ್ಞಾನ) ನಿಪುಣನಾಗಿರಬೇಕು ಮತ್ತು ಶಿಲ್ಪಕಲೆಯು ಶುದ್ಧ ವಿಜ್ಞಾನವಾಗಿದೆ. ಅವನೊಬ್ಬ ಪರಿಪೂರ್ಣ ತಂತ್ರಜ್ಞ (ಇಂಜಿನಿಯರ್) ಆಗಿರಬೇಕಿಲ್ಲ. ಆದರೆ ಸೃಜನಶೀಲತೆಯಲ್ಲಿ ಆತನ ಕುಶಲತೆ ಕ್ರಿಯಾತ್ಮಕ (ಫಂಕ್ಷನಲ್) ಹಾಗೂ ಸ್ಥಿರವಾದ ಉತ್ಪನ್ನದ ತಯಾರಿಯಲ್ಲಿ ಇಂಜಿನಿಯರ್​ಗೆ ನೆರವಾಗುತ್ತದೆ. ಇದಕ್ಕಾಗಿ ಮಾನವ (ಪುರುಷ), ಪ್ರಕೃತಿ ಮತ್ತು ಆಶ್ರಯ (ಗೃಹ) ನಡುವಿನ ಅವಿನಾಭಾವ ಸಂಬಂಧದ ಆಳವಾದ ಅಧ್ಯಯನ ಅತ್ಯಗತ್ಯವಾಗಿದೆ. ಇದು ಸರಕುಗಳು ಮತ್ತು ಅವುಗಳ ಶಕ್ತಿಗಳ ವಿಶ್ಲೇಷಣೆ, ಜೋಡಣೆ ಮತ್ತು ಬಿಡಿಭಾಗಗಳ ಬಳಕೆಯನ್ನು ಒಳಗೊಂಡಿರುತ್ತದೆ. ಕಟ್ಟಡದಂಥ ಉತ್ಪನ್ನಗಳ ಅಂತಿಮ ಉತ್ಪನ್ನ ಪಡೆಯುವ ನಿಟ್ಟಿನಲ್ಲಿ ಇದು ಅಗತ್ಯವಾಗುತ್ತದೆ. ಇದನ್ನೇ ವಿನ್ಯಾಸ ಪ್ರಕ್ರಿಯೆ ಎನ್ನುತ್ತೇವೆ.

ಮಾನವ ನಿರ್ವಿುತ ಪರಿಸರಕ್ಕೆ ಪ್ರಕೃತಿಯೇ ಶಕ್ತಿಯ ಮುಖ್ಯ ಮೂಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಆದ್ದರಿಂದ ನೈಸರ್ಗಿಕ ಪರಿಸರ ಹಾಗೂ ನಾನಾ ಚಟುವಟಿಕೆಗಳಿಗೆ ಅವಶ್ಯವಾದ ಭೌತಿಕ ಸ್ಥಳಗಳನ್ನು ನಿರ್ಧರಿಸುವಲ್ಲಿ ಶಕ್ತಿಯ ಐದು ಮೂಲ ಅಂಶಗಳು ಮತ್ತು ಮಾನವ ಜೀವನದ ಮೇಲೆ ಅವುಗಳ ಪ್ರಭಾವದ ಕುರಿತು ವಿವರ ಹಾಗೂ ಆಳವಾದ ಅಧ್ಯಯನ ನಡೆಸುವುದು ಅಗತ್ಯ.

1) ಭೂಮಿ ಅಥವಾ ಪೃಥ್ವಿ: ದೃಢವಾದ ಆಹಾರ ಮತ್ತು ಗುರುತ್ವಾಕರ್ಷಣ ಹಾಗೂ ಅಯಸ್ಕಾಂತೀಯ (ಮ್ಯಾಗ್ನೆಟಿಕ್) ಶಕ್ತಿಗಳನ್ನು ಇದು ಪೂರೈಸುತ್ತದೆ.

2) ನೀರು/ಆರ್ದ್ರತೆ: ಇದು ಜಲಶಕ್ತಿಯನ್ನು ಒದಗಿಸುತ್ತದೆ.

3) ಬೆಳಕು+ಉಷ್ಣತೆ (ತೇಜ): ಎಲೆಕ್ಟ್ರೋ-ಮ್ಯಾಗ್ನೆಟಿಕ್ ಮತ್ತು ಉಷ್ಣ ಶಕ್ತಿಯನ್ನು ಇದು ಪೂರೈಸುತ್ತದೆ.

4) ಗಾಳಿ/ವಾಯು ಮತ್ತು

5) ಧ್ವನಿ (ನಭ ಅಥವಾ ಬ್ರಹ್ಮಾಂಡ ಸದ್ದು): ಇದು ಸೋನಿಕ್ ಶಕ್ತಿಯನ್ನು ಒದಗಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾನವ ಜೀವಿ ನಾನಾ ಚಟುವಟಿಕೆಗಳನ್ನು ನಡೆಸಲು ಬಯಸುವ ಪೂರಕವಾದ ನೈಸರ್ಗಿಕ ಪರಿಸರಕ್ಕೆ ಅಗತ್ಯವಾದ ಭೌತಿಕ ವೇದಿಕೆಗಳ ಸೃಷ್ಟಿಯ ಬಯಕೆ ಹಾಗೂ ವಿನ್ಯಾಸದ ಪ್ರಕ್ರಿಯೆಯನ್ನು ‘ವಾಸ್ತುಶಾಸ್ತ್ರ’ ಎನ್ನುತ್ತಾರೆ. ಇದು ವಾಸ್ತುಶಿಲ್ಪದ ಪ್ರಾಚೀನ ಸಾದೃಶ್ಯವಾಗಿದೆ.

ಶಿಕ್ಷಣದಲ್ಲಿ ವಾಸ್ತುಶಿಲ್ಪ

ವಾಸ್ತುಶಿಲ್ಪದ ಶಿಕ್ಷಣವನ್ನು ಪರಿಪೂರ್ಣ ಹಾಗೂ ಮಾನವ ಕೇಂದ್ರಿತ ವಿಷಯವನ್ನಾಗಿ ಮಾಡುವ ನಿಟ್ಟಿನಲ್ಲಿ ಐದು ವರ್ಷಗಳ ಕೋರ್ಸ್​ನ ಮಹತ್ವವನ್ನು ಬಲಪಡಿಸಲು ಕೆಳಗಿನ ಸಲಹೆಗಳು ನೆರವಾಗಬಲ್ಲದು:

  • ಪುರುಷ, ಪ್ರಕೃತಿ ಮತ್ತು ಆಶ್ರಯದ ವಾಸ್ತು ನಡುವಿನ ಸಂಬಂಧದ ಅರ್ಥೈಸುವಿಕೆ.
  • ಮಾನವರು ಸಾಮಾಜಿಕ ಪ್ರಾಣಿ ಹಾಗೂ ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿಸಿದ್ದಾನೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
  • ವಾಸ್ತುಶಿಲ್ಪ ಶಿಕ್ಷಣವು ಇಂಜಿನಿಯರಿಂಗ್-ವಿನ್ಯಾಸ ಮತ್ತು ವಿನ್ಯಾಸ-ಸೌಂದರ್ಯ ಕೇಂದ್ರಿತವಾಗಿರುವುದಕ್ಕೆ ಬದಲು ಜೈವಿಕ-ವಿನ್ಯಾಸಕ್ಕೆ ಆದ್ಯತೆ ನೀಡಬೇಕು.
  • ಕಟ್ಟಡ ನಿರ್ವಣದ (ವಾಸ್ತು) ಸಮಯದಲ್ಲಿ ಮಾನವರ ಮೇಲೆ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳ ಮಹತ್ವವನ್ನು ಅಧ್ಯಯನ ಮಾಡಬೇಕು.
  • ಸೂರ್ಯಪಥ ಮತ್ತು ಸೂರ್ಯನ ಕಿರಣಗಳು ಮಾನವರ ಮೇಲೆ ಬೀರುವ ಪ್ರಭಾವಗಳ ಅಧ್ಯಯನ ಅಗತ್ಯ.
  • ಬಣ್ಣಗಳು ಶಕ್ತಿಯ ಮೂಲವಾಗಿದ್ದು, ಮಾನವ ಜೀವನದ ಅಗತ್ಯ ಭಾಗವಾಗಿವೆ. ಮಾನವನ ಮಿದುಳು ಬಣ್ಣಗಳಿಗೆ ಸ್ಪಂದಿಸುತ್ತದೆ. ಆದ್ದರಿಂದ ವಾಸ್ತುಶಿಲ್ಪದಲ್ಲಿ ಬಣ್ಣಗಳ ಅಧ್ಯಯನವೂ ಮುಖ್ಯ.
  • ಕಿಟಕಿಗಳ ಮಹತ್ವವನ್ನು ಅರಿಯಬೇಕು.

ಬಯಲು ನಿವೇಶನ ಅಥವಾ ಸ್ಥಳಗಳಿಗೆ ಅನ್ವಯವಾಗದ ವಾಸ್ತು ಅಂಶಗಳು ಕಟ್ಟಡಗಳಿಗೆ ಅನ್ವಯವಾಗುತ್ತದೆ. ಆದ್ದರಿಂದ, ವಾಸ್ತುಶಿಲ್ಪ ವಿದ್ಯಾರ್ಥಿಯು ಕಠಿಣ ಐದು ವರ್ಷಗಳ (10 ಸೆಮಿಸ್ಟರ್=8+2 ಕಡ್ಡಾಯ ತರಬೇತಿಯ ಸೆಮಿಸ್ಟರ್) ಸೂಕ್ತ ಶಿಕ್ಷಣ ಪಡೆಯಬೇಕು. ಈ ಪ್ರಾಯೋಗಿಕ ಮತ್ತು ಮಾನವ ಕೇಂದ್ರಿತ ವಿಷಯವನ್ನು ವಾಸ್ತುಶಿಲ್ಪ ಮಂಡಳಿ ಮತ್ತು ಭಾರತೀಯ ವಾಸ್ತುಶಿಲ್ಪಿಗಳ ಸಂಸ್ಥೆಯ ಆಡಳಿತ ಮಂಡಳಿಗಳು ಆಳವಾಗಿ ಪರಿಶೀಲಿಸಬೇಕು.

(ಲೇಖಕರು ವಾಸ್ತುಶಾಸ್ತ್ರ ತಜ್ಞರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net