

ಬೆಂಗಳೂರು: ಯಲಹಂಕದ ವಾಯುಪಡೆ ಕೇಂದ್ರದ ಮುಖ್ಯಸ್ಥರಾಗಿ ಏರ್ ಕಮಾಂಡರ್ ರೋಹಿತ್ ವಿಜಯದೇವ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧಿಕಾರಿ ಏರ್ ಕಮಾಂಡರ್ ಮುಖೇಶ್‌ಕುಮಾರ್ ಯಾದವ್ ಅಧಿಕಾರ ಹಸ್ತಾಂತರಿಸಿದರು.
ನಗರದ ಯಲಹಂಕದಲ್ಲಿರುವ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರೋಹಿತ್ ವಿಜಯದೇವ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಕೇಂದ್ರದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಏರ್ ಕಮಾಂಡರ್ ರೋಹಿತ್ ವಿಜಯದೇವ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, 1997ರಲ್ಲಿ ಐಎಎಫ್ ಪೈಲಟ್ ಶಾಖೆಗೆ ನಿಯೋಜಿಸಲ್ಪಟ್ಟಿದ್ದರು. ರೋಹಿತ್ ವಿವಿಧ ಮಾದರಿಯ ಸಾರಿಗೆ ವಿಮಾನಗಳಲ್ಲಿ ಒಟ್ಟು 6,200 ಗಂಟೆಗಳ ಕಾಲ ಹಾರಾಟ ನಡೆಸಿರುವ ಅನುಭವ ಹೊಂದಿದ್ದಾರೆ. ಆವ್ರೋ, ಎಂಬೈರ್ ಹಾಗೂ ಡಾರ್ನಿಯರ್-228 ಮಾದರಿಯ ವಿಮಾನಗಳಗಳನ್ನು ದೇಶದ ವಿವಿಧೆಡೆ ಹಾರಾಟ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಇವರು ‘ಎ’ ದರ್ಜೆಯ ವಿಮಾನ ಹಾರಾಟ ತರಬೇತಿದಾರರಲ್ಲದೆ ‘ಮಾಸ್ಟರ್ ಗ್ರೀನ್ ಪೈಲಟ್’ ಆಗಿಯೂ ಗುರುತಿಸಿಕೊಂಡಿದ್ದಾರೆ.
ಏರ್ ಕಮಾಂಡರ್ ರೋಹಿತ್ ಅವರು ವೆಲ್ಲಿಂಗ್‌ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜ್ ಹಾಗೂ ಗೋವಾದ ನೇವಲ್ ವಾರ್ ಕಾಲೇಜಿನಲ್ಲಿ ವಿವಿಧ ಕೋರ್ಸ್‌ಗಳಲ್ಲಿ ಪಾರಮ್ಯ ಮೆರೆದಿದ್ದಾರೆ. ರಾಷ್ಟ್ರಪತಿಯವರಿಂದ ಪ್ರತಿಷ್ಠಿತ ವಾಯುಸೇನಾ ಪದಕವನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.