

ಕಾಬುಲ್/ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸೇನೆ ಮತ್ತು ಜನರನ್ನು ತೆರವುಗೊಳಿಸುವ ಅಂತಿಮ ಹಂತದ ಕಾರ್ಯಾ ಚರಣೆಯಲ್ಲಿ ತೊಡಗಿರುವ ಅಮೆರಿಕ ಸೇನೆ ಇರುವ ಕಾಬುಲ್ ವಿಮಾನ ನಿಲ್ದಾಣದ ಮೇಲೆ ಸೋಮವಾರ ರಾಕೆಟ್ ದಾಳಿ ನಡೆದಿವೆ. ಅದನ್ನು ಅಮೆರಿಕ ಸೇನೆ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಮೂಲಕ ತಡೆದಿದೆ. ಅಮೆರಿಕ ಸೇನೆ ಮತ್ತು ಜನರನ್ನು ತೆರವುಗೊಳಿಸುವುದಕ್ಕೆ ನಿಗದಿಯಾಗಿದ್ದ ಗಡುವು ಇಂದು ಮುಕ್ತಾಯವಾಗುತ್ತಿದೆ. ಹೀಗಾಗಿ, ಸಮರೋಪಾದಿಯಲ್ಲಿ ಈ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆ ತೊಡಗಿರುವಾಗಲೇ ಉಗ್ರರು ದಾಳಿ ನಡೆಸಿದ್ದಾರೆ. ಇದುವರೆಗೆ ಕಾಬುಲ್ ಏರ್ಪೋರ್ಟ್ ಮೂಲಕ 1.2 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ರಕ್ಷಣೆಗೆ ಅಗತ್ಯ ಮತ್ತು ತುರ್ತಕ್ರಮಗಳನ್ನು ಜರುಗಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಖಚಿತಪಡಿಸಿದ್ದಾರೆ ಎಂದು ವೈಟ್ಹೌಸ್ ಹೇಳಿದೆ.
ಭಾರತದ ಜತೆಗೆ ಉತ್ತಮ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯನ್ನು ನಿರೀಕ್ಷಿಸಲಾಗುತ್ತಿದೆ. ಧನಾತ್ಮಕವಾಗಿ ವ್ಯಾಪಾರ, ವ್ಯವಹಾರ ಸಹಕಾರಗಳೊಂದಿಗೆ ಮುನ್ನಡೆಯಲು ಬಯಸುತ್ತಿದ್ದೇವೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ರೆೈ ಸಂದರ್ಶನವೊಂದರಲ್ಲಿ ತಿಳಿಸಿದ್ದಾನೆ. ಭಾರತ ಮತ್ತು ಇತರೆ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಹಕಾರ, ಬಾಂಧವ್ಯ ಮುಂದುವರಿಸಿಕೊಂಡು ಹೋಗಬೇಕೆಂಬುದು ಅಫ್ಘನ್ ಇರಾದೆ. ಪಾಕಿಸ್ತಾನದ ಮೂಲಕವೇ ಭಾರತದ ಜತೆಗೆ ವಾಣಿಜ್ಯ ವಹಿವಾಟು ಮುಂದುವರಿಸಿಕೊಂಡು ಹೋಗಬೇಕೆಂಬ ಇಚ್ಛೆಯೂ ನಮಗಿದೆ. ಇದೇ ವೇಳೆ, ಅಫ್ಘನ್ ನೆಲವನ್ನು ಇತರರ ವಿರುದ್ಧ ಉಪಯೋಗಿಸಲು ಯಾವ ದೇಶಕ್ಕೂ, ಯಾವ ಸಂಘಟನೆಗಳಿಗೂ ಅವಕಾಶ ನೀಡುವುದಿಲ್ಲ. ಅಫ್ಘನ್ನಿಂದ ಯಾವ ರಾಷ್ಟ್ರಕ್ಕೂ ಬೆದರಿಕೆ ಇಲ್ಲ ಎಂದು ಭಾರತ ಮತ್ತು ಪಾಕಿಸ್ತಾನಗಳಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾನೆ. ಶೇರ್ ಮೊಹಮ್ಮದ್ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೇ ವಿದ್ಯಾರ್ಥಿಯಾಗಿದ್ದು, ಈ ಬಗ್ಗೆ ಕೇಳಿದಾಗ ಅದು ಯೌವನ ಕಾಲದಲ್ಲಿ ನಡೆದ ವಿಚಾರ. ಆ ಬ್ಯಾಚಿನವರೊಂದಿಗೆ ಈಗ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾನೆ.
ಅಫ್ಘನ್ ಈಗ ತಾಲಿಬಾನ್ ವಶದಲ್ಲಿದೆ. ಉಗ್ರ ನಿಗ್ರಹ ಮತ್ತು ಆಡಳಿತಾತ್ಮಕ ವಿಚಾರದಲ್ಲಿ ತಾಲಿಬಾನಿಗಳಿಗೆ ಮಾರ್ಗದರ್ಶನ ಮಾಡಬೇಕು. ಎಲ್ಲ ರಾಷ್ಟ್ರಗಳೂ ಈ ವಿಚಾರದಲ್ಲಿ ತಾಲಿಬಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಚೀನಾ ಹೇಳಿದೆ. ಅಮೆರಿಕ ಭಾನುವಾರ ನಡೆಸಿದ ಡ್ರೋನ್ ದಾಳಿ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಆಂಟನಿ ಬ್ಲಿನ್ಕೆನ್ ಜತೆಗೆ ಟೆಲಿಫೋನ್ ಸಂಭಾಷಣೆ ನಡೆಸಿದ ವೇಳೆ ಈ ಮಾತನ್ನು ಹೇಳಿದರು. ಅಫ್ಘನ್ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ತಾಲಿಬಾನ್ಗೆ ಎಲ್ಲ ರಾಷ್ಟ್ರಗಳೂ ನೆರವು ನೀಡಬೇಕಾದ ಅಗತ್ಯವಿದೆ ಎಂದು ಯೀ ಹೇಳಿದ್ದಾಗಿ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಕಾಬುಲ್ ಅವಳಿ ಸ್ಪೋಟದ ದಾಳಿಗೆ ಡಾಯಿಷ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ದ ಲೆವಂಟ್) ಕಾರಣ. ಅದುವೇ ಈ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಈ ಕುರಿತ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದು, ಪತ್ರಿಕೆಗಳಲ್ಲಿ ಇದನ್ನು ಓದಿದ್ದೇನೆ. ಐಸಿಸ್-ಕೆ ಅಥವಾ ಹಕ್ಕಾನಿ ಇದನ್ನು ಮಾಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಅಫ್ಘನ್ ವಿದೇಶಾಂಗ ವ್ಯವಹಾರಗಳ ಸಚಿವ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ರೆೈ ಸ್ಪಷ್ಟಪಡಿಸಿದ್ದಾನೆ.
ಕಾಬುಲ್ ಏರ್ಪೋರ್ಟ್ ಮೇಲೆ ಆತ್ಮಾಹುತಿ ಬಾಂಬರ್ ಕಾರ್ ದಾಳಿ ನಡೆಸಲು ಸಿದ್ಧತೆ ನಡೆಸಿದ್ದ. ತಾಲಿಬಾನ್ ಮತ್ತು ಅಮೆರಿಕಕ್ಕೆ ಶತ್ರುವಾಗಿರುವ ಐಸಿಸಿ-ಕೆ ಈ ಕೃತ್ಯ ನಡೆಸಲು ಮುಂದಾಗಿತ್ತು. ಈ ಕುರಿತ ಖಚಿತ ಮಾಹಿತಿ ಆಧರಿಸಿಯೇ ಈ ಡ್ರೋನ್ ದಾಳಿ ನಡೆಸಲಾಗಿತ್ತು. ದಾಳಿ ಮೂಲಕ ಕಾರನ್ನು ನಾಶಪಡಿಸಲಾಗಿದೆ. ಸ್ಪೋಟದ ತೀವ್ರತೆಯು ಕಾರಿನಲ್ಲಿ ಸ್ಪೋಟಕ ಇತ್ತೆಂಬುದನ್ನು ಖಚಿತಪಡಿಸುತ್ತದೆ. ಇದ ರಲ್ಲಿ ನಾಗರಿಕರು ಮೃತರಾಗಿರುವ ಬಗ್ಗೆ ವರದಿ ಯಾಗಿದೆ. ಈ ಕುರಿತು ತನಿಖೆ ನಡೆಸಲಾಗು ತ್ತಿದೆ ಎಂದು ಅಮೆರಿಕ ಹೇಳಿದೆ.
ಅಫ್ಘಾನಿಸ್ತಾನದ ಸಿಖ್ಖರು ಮತ್ತು ಹಿಂದುಗಳು ಬೇರೆ ದೇಶಗಳಿಗೆ ಹೋಗಬೇಕಾಗಿಲ್ಲ. ಇದು ಅವರದ್ದೇ ದೇಶ. ಅವರನ್ನು ಸ್ಥಳಾಂತರಿಸುವ ಅವಶ್ಯಕತೆ ಇಲ್ಲ. ಅವರು ಇಲ್ಲಿ ಶಾಂತಿ ನೆಮ್ಮದಿಯಿಂದ ಬಾಳುವೆ ನಡೆಸಬಹುದು. ಕಳೆದ 20 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ವಲಸೆ ಹೋದವರೆಲ್ಲರೂ ವಾಪಸ್ ಇಲ್ಲಿಗೆ ಬಂದೇ ಬರುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ರೆೈ ಹೇಳಿಕೊಂಡಿದ್ದಾನೆ.
ಏರ್ಪೋರ್ಟ್ ತಾಲಿಬಾನ್ ವಶಕ್ಕೆ: ಸೇನೆ ಹಿಂಪಡೆಯುವುದಕ್ಕೆ ಗಡುವು ಸಮೀಪಿಸುತ್ತಿರುವಂತೆ ಅಮೆರಿಕ, ಕಾಬುಲ್ ಏರ್ಪೋರ್ಟ್ನ ಮೂರು ಗೇಟ್ಗಳನ್ನು ತಾಲಿಬಾನ್ ವಶಕ್ಕೆ ನೀಡಿದೆ. ಉಗ್ರರು ದಾಳಿ ನಡೆಸಿದ ಪೂರ್ವದ ಗೇಟ್ ಸೇರಿ ಮೂರು ಗೇಟ್ಗಳು ಈಗ ತಾಲಿಬಾನ್ ವಶದಲ್ಲಿವೆ. ಇದರೊಂದಿಗೆ ವಿಮಾನ ಹಾರಾಟದ ನಿಯಂತ್ರಣವನ್ನೂ ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.
ಉಗ್ರರು ಆತ್ಮಾಹುತಿ ದಾಳಿ ನಡೆಸಿ 13 ಅಮೆರಿಕ ಯೋಧರು ಸೇರಿ 180ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ, ಅಮೆರಿಕ ಭಾನುವಾರ ಡ್ರೋನ್ ದಾಳಿ ನಡೆಸಿತ್ತು. ಇದರಲ್ಲಿ ಮಗು ಸೇರಿ ಮೂವರು ಬಲಿಯಾಗಿದ್ದಾರೆ. ಇದು ನಿರಂಕುಶ ದಾಳಿಯಾಗಿತ್ತು. ನಮ್ಮ ನೆಲದಲ್ಲಿ ಈ ರೀತಿ ಮಾಡುವ ಬದಲು ನಮಗೆ ಈ ವಿಚಾರ ತಿಳಿಸಬಹುದಿತ್ತು. ವಿದೇಶಿ ನೆಲದಲ್ಲಿ ಅಮೆರಿಕದ ಕೃತ್ಯ ಅಕ್ರಮ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸೋಮವಾರ ಚೀನಾದ ಸರ್ಕಾರಿ ಸ್ವಾಮ್ಯದ ಟೆಲಿವಿಷನ್ ಸಿಜಿಟಿಎನ್ಗೆ ಹೇಳಿದ್ದಾರೆ.
6 ಮಕ್ಕಳು ಸೇರಿ 10 ಸಾವು?: ಬಾಂಬರ್ ಇದ್ದ ಕಾರಿನ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಗೆ ಭಾನುವಾರ ಕಾರಿನ ಸುತ್ತಮುತ್ತ ಇದ್ದವರೂ ಬಲಿಯಾಗಿದ್ದಾರೆ. ಕನಿಷ್ಠ 10 ಜನ ಸಾವನ್ನಪ್ಪಿದ್ದು, ಇದರಲ್ಲಿ ಆರು ಮಕ್ಕಳಿದ್ದಾರೆ ಎಂದು ಟೋಲೊ ನ್ಯೂಸ್ ಸ್ಥಳೀಯರು ನೀಡಿದ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ.
ತಾಲಿಬಾನ್ ಶತ್ರುಗಳೆಲ್ಲ ನಿರ್ನಾಮ?: ಅಫ್ಘನ್ ತಾಲಿಬಾನ್ ವಶವಾಗುತ್ತಿದ್ದಂತೆ, ತಾಲಿಬಾನಿಗಳು ಮನೆ ಮನೆ ಶೋಧ ನಡೆಸಿ ಶತ್ರುಗಳನ್ನು ಗುರುತಿಸಿ ಹತ್ಯೆ ಮಾಡುವ ಕೆಲಸ ಮಾಡತೊಡಗಿದ್ದರು. ತಾಲಿಬಾನಿ ನಾಯಕರು ಸುಧಾರಣಾವಾದಿಗಳ ಮುಖವನ್ನು ಜಾಗತಿಕಮಟ್ಟದಲ್ಲಿ ತೋರಿಸುತ್ತಿದ್ದರೂ, ತಳಮಟ್ಟದಲ್ಲಿ ತಾಲಿಬಾನಿ ಸೇನೆ ಶತ್ರು ದಮನ ಕಾರ್ಯದಲ್ಲಿ ತೊಡಗಿತ್ತು. ಅದನ್ನು ಈಗಲೂ ಮುಂದವರಿಸಿದ್ದು, ಅಮೆರಿಕ ಮತ್ತು ನ್ಯಾಟೊ ಪಡೆ ಅಫ್ಘನ್ ನೆಲ ಬಿಟ್ಟ ಕೂಡಲೆ ಸಂಪೂರ್ಣ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ನ ಏಷ್ಯಾ ಡೈರೆಕ್ಟರ್ ಪೆಟ್ರೇಷಿಯಾ ತಿಳಿಸಿದ್ದಾರೆ.
ಅಫ್ಘನ್ಗೆ ಲಾಡೆನ್ನ ಮಾಜಿ ಸಹಚರ: ಅಲ್ ಖೈದಾದ ನಾಯಕ ಅಮಿನ್ ಉಲ್ ಹಕ್ ಅಫ್ಘನ್ನ ನಂಗರ್ಹಾರ್ ಪ್ರಾಂತ್ಯದಲ್ಲಿರುವ ತನ್ನ ತಾಯ್ನಾಡಿಗೆ ಮರಳಿದ್ದಾನೆ. ಅಲ್ಲಿ ತಾಲಿಬಾನ್ ಆಡಳಿತ ಶುರುವಾದ ಕಾರಣ ಆತ ವಾಪಸಾಗಿದ್ದಾನೆ. ಈತ ಒಸಾಮಾ ಬಿನ್ ಲಾಡೆನ್ನ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ. ಟೊರಾ ಬೊರಾದಲ್ಲಿ ಲಾಡೆನ್ ಇದ್ದಾಗ ಆತನ ಭದ್ರತಾ ಮುಖ್ಯಸ್ಥನಾಗಿ ಕೆಲಸ ಮಾಡಿದ್ದ ಎಂದು ವರದಿಯಾಗಿದೆ.
ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ ಝುದಾಗೆ ಸಂಬಂಧಿಸಿದ ಒಂದು ಫೋಟೋ ಬಹಿರಂಗವಾಗಿದ್ದು ಬಿಟ್ಟರೆ, ಆತ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅಫ್ಘನ್ ತಾಲಿಬಾನ್ ವಶವಾಗಿದ್ದರೂ, ಬಹಿರಂಗವಾಗಿ ಕಾಣಿಸಿಕೊಳ್ಳದ ಆತನ ಇರುವಿಕೆಯ ಬಗ್ಗೆ ಜಾಗತಿಕವಾಗಿ ಕುತೂಹಲ ಕೆರಳಿದೆ. ಇವೆಲ್ಲದರ ನಡುವೆ, ಅಖುಂಡ್ರೆದಾ ಅಫ್ಘನ್ನಲ್ಲೇ ಇದ್ದು, ಶೀಘ್ರದಲ್ಲೇ ಕಾಣಿಸಲಿದ್ದಾರೆ. ಆತ ಕಂದಹಾರ್ನ ನಿವಾಸಿಯಾಗಿದ್ದು, ಈಗಲೂ ಅಲ್ಲೇ ಇದ್ದಾನೆ ಎಂದು ತಾಲಿಬಾನ್ನ ಡೆಪ್ಯೂಟಿ ವಕ್ತಾರ ಬಿಲಾಲ್ ಕರಿಮಿ ಭಾನುವಾರ ಹೇಳಿದ್ದ. ಅಖುಂಡ್ರೆದಾ 2016ರಿಂದ ತಾಲಿಬಾನ್ ಮುಖಸ್ಥನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ತಾಲಿಬಾನ್ ಇತಿಹಾಸವನ್ನು ಗಮನಿಸಿದರೆ, ಅದರ ಉನ್ನತ ನಾಯಕ/ಮುಖ್ಯಸ್ಥನನ್ನು ಮರೆಯಲ್ಲಿ ಇರಿಸುವುದು ಇದೇ ಮೊದಲೇನಲ್ಲ. ತಾಲಿಬಾನ್ನ ಸಂಸ್ಥಾಪಕ ಕುಖ್ಯಾತ ಉಗ್ರ ಮುಲ್ಲಾ ಮೊಹಮ್ಮದ್ ಒಮರ್, 1990ರ ದಶಕದಲ್ಲಿ ಸಂಘಟನೆ ಅಫ್ಘನ್ನಲ್ಲಿ ಅಧಿಕಾರದಲ್ಲಿ ಇದ್ದಾಗ ಬಹಳ ವಿರಳವಾಗಿ ಕಾಬುಲ್ಗೆ ಪ್ರಯಾಣ ಬೆಳಸಿದ್ದ. ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ. ಆತ ಹೇಳಿದ್ದೇ ಅಂತಿಮ ನಿರ್ಣಯವಾಗಿರುತ್ತಿತ್ತು. ಬಹುಶಃ ಅಖುಂಡ್ರೆದಾ ಕೂಡ ಇದೇ ರೀತಿಯ ಕಾರ್ಯಶೈಲಿಯನ್ನು ಅನುಸರಿಸುತ್ತಿರಬಹುದು. ಸುರಕ್ಷಾ ಕಾರಣಕ್ಕಾಗಿಯೂ ಈ ರೀತಿ ನೇಪಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರಬಹುದು. ಈ ಹಿಂದಿನ ಮುಖ್ಯಸ್ಥ ಮುಲ್ಲಾ ಅಖ್ತರ್ ಮನ್ಸೂರ್ನನ್ನು ಅಮೆರಿಕ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿತ್ತು ಎಂಬುದನ್ನು ರಾಜತಾಂತ್ರಿಕ ಪರಿಣತರು ಉಲ್ಲೇಖಿಸಿದ್ದಾರೆ.
ಶ್ರೀನಗರ: ಅಫ್ಘನ್ ತಾಲಿಬಾನ್ ವಶವಾಗಿರುವುದು ಜಮ್ಮು-ಕಾಶ್ಮೀರದಲ್ಲಿ ತಳಮಳ ಹೆಚ್ಚಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಉಗ್ರರ ಆರು ತಂಡಗಳು ಒಳಸುಳಿವೆ ಎಂಬ ವರ್ತಮಾನವನ್ನು ಬೇಹುಗಾರಿಕಾ ದಳ ನೀಡಿದೆ. ಈ ಉಗ್ರರು ಕಾಶ್ಮೀರದಲ್ಲಿ ಅಶಾಂತಿ ಉಂಟು ಮಾಡಲು ಪ್ರಮುಖ ಸ್ಥಳಗಳನ್ನು ಗುರಿಯಾಗಿರಿಸಿಕೊಂಡಿರುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.ಜಮ್ಮು-ಕಾಶ್ಮೀರದಲ್ಲಿ ಕಳೆದೆರಡು ವರ್ಷದಿಂದ ವಿಧ್ವಂಸಕೃತ್ಯಕ್ಕೆ ಕಡಿವಾಣ ಬಿದ್ದಿತ್ತು. ಆದರೆ, ಅಮೆರಿಕ ಸೇನೆ ಅಫ್ಘನ್ನಿಂದ ವಾಪಸು ಹೋಗುವ ಕಾಲ ಸನ್ನಿಹಿತ ಆಗುತ್ತಿದ್ದಂತೆ ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನ ಹೆಚ್ಚಿದವು. ತಾಲಿಬಾನ್ ಅಫ್ಘನ್ನನ್ನು ವಶಪಡಿಕೊಳ್ಳುತ್ತಿದ್ದಂತೆ ಗಡಿಯಲ್ಲಿ ಉಗ್ರರ ಪ್ರತಾಪ ಹೆಚ್ಚಾಯಿತು. ಎಲ್ಒಡಿ ಬಳಿಯ ಲಾಂಚ್ ಪ್ಯಾಡ್ಗಳು ಸಕ್ರಿಯವಾದವು ಎಂದು ಬೇಹುಕಾರಿಕಾ ದಳ ಹೇಳಿದೆ.
ಗನ್ಪಾಯಿಂಟ್ನಲ್ಲಿ ವಾರ್ತಾವಾಚಕ: ತಾಲಿಬಾನ್ ಆಡಳಿತದಲ್ಲಿ ಟಿವಿ ವಾರ್ತಾವಾಚಕನೊಬ್ಬ ಗನ್ ಪಾಯಿಂಟ್ನಲ್ಲಿ ವಾರ್ತೆ ಓದಬೇಕಾದ ಪ್ರಸಂಗ ಎದುರಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇರಾನ್ನ ಪತ್ರಕರ್ತೆ ಮಾಸಿಹ್ ಅಲೆನೆಜಾ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಆರಂಭದಲ್ಲಿ ತಾಲಿಬಾನಿಗಳಿಬ್ಬರು ಗನ್ ಹಿಡಿದು ವಾರ್ತಾವಾಚಕನನ್ನು ಬೆದರಿಸಿ ತಾಲಿಬಾನ್ ಬಗ್ಗೆ ಒಳ್ಳೆಯ ಸುದ್ದಿ ಓದುವಂತೆ ಮಾಡಿರುವುದು ಕಂಡುಬಂದಿದೆ. ಟಿವಿ ಕ್ಯಾಮರಾ ಬಳಿಕ ಸಂಪೂರ್ಣ ಸ್ಟುಡಿಯೋವನ್ನು ತೋರಿಸಿದ್ದು ಅಲ್ಲಿ ಏಳೆಂಟು ತಾಲಿಬಾನಿಗಳು ಗನ್ ಹಿಡಿದು ನಿಂತಿರುವ ದೃಶ್ಯವಿದೆ.