ಕರೊನಾ ಸೋಂಕಿತರ ಚಿಕಿತ್ಸೆ ಟೊಂಕ ಕಟ್ಟಿ ನಿಲ್ಲಲಿವೆ ರೋಬಾಟ್​ಗಳು!

Robat corona 1 APR 20
Published on

ಮುಂಬೈ: ಪ್ರತ್ಯೇಕಿಸಲ್ಪಟ್ಟ ವಾರ್ಡ್‌ಗಳಲ್ಲಿ ಇರುವ ಕರೊನಾ ವೈರಸ್‌ ಸೋಂಕಿತರಿಗೆ ಆಹಾರ, ಔಷಧಗಳನ್ನು ಪೂರೈಸುವುದಕ್ಕಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಸಂಶೋಧಕರು ಎರಡು ಬಗೆಯ ರೋಬಾಟ್​ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಗುವಾಹಟಿಯ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಮತ್ತು ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ವಿಭಾಗದ ಸಂಶೋಧಕರು ಇದನ್ನು ಅಭಿವೃದ್ಧಿ ಪಡಿಸಿದ್ದು, ಇವು ರೋಗಿಗಳ ಸಾಂಕ್ರಾಮಿಕ ತ್ಯಾಜ್ಯಗಳನ್ನೂ ಸಂಗ್ರಹಿಸುತ್ತವೆ.

‘ ಈ ಎರಡು ರೋಬಾಟ್​ಗಳ ಪೈಕಿ ಒಂದು ಪ್ರತ್ಯೇಕ ವಾರ್ಡ್‌ಗಳಲ್ಲಿ ಇರುವ ಸೋಂಕಿತರ ಆಹಾರ ಮತ್ತು ಔಷಧಿಗಳನ್ನು ಪೂರೈಸಿದರೆ, ಇನ್ನೊಂದು ಅವರ ತ್ಯಾಜ್ಯಗಳನ್ನು ಸಂಗ್ರಹಿಸಲಿದೆ. ಇದರಿಂದ ಮನುಷ್ಯರ ನೇರ ಸಂಪರ್ಕವನ್ನು ಸಾಕಷ್ಟು ತಪ್ಪಿಸಬಹುದಾಗಿದೆ ಎಂದಿದ್ದಾರೆ ಸಂಶೋಧಕರು.

ಎರಡು ವಾರಗಳಲ್ಲಿ ಮೂಲಮಾದರಿಗಳು ಸಿದ್ಧವಾಗುತ್ತವೆ, ಆ ನಂತರ ಆಸ್ಪತ್ರೆ ಮತ್ತು ನ್ಯಾನೊತಂತ್ರಜ್ಞಾನ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಇಲ್ಲಿ ಆರೋಗ್ಯ ಕೇಂದ್ರದ ವೈದ್ಯರು, ದಾದಿಯರು ಮತ್ತು ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಇದು ಯಶಸ್ವಿಯಾದರೆ ರೋಬೋಟ್ ಆಧಾರಿತ ಸ್ಕ್ರೀನಿಂಗ್ ಘಟಕಗಳನ್ನು ಸಹ ಮಾಡುವ ಯೋಜನೆ ಈ ಸಂಶೋಧಕರಿಗಿದೆ. ಇವಿಷ್ಟೇ ಅಲ್ಲದೇ ಕರೊನಾ ವೈರಸ್‌ ಕುರಿತ ಸಂಶೋಧನೆಗಾಗಿ ಸುಧಾರಿತ ಸಂಶೋಧನಾ ಕೇಂದ್ರ ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಮೂಲಕ ವೈರಸ್‌ ಕುರಿತ ಇನ್ನಷ್ಟು ಸಂಶೋಧನೆಗಳು ಹೊರಬರಲಿವೆ ಎಂಬ ವಿಶ್ವಾಸ ಈ ಸಂಶೋಧಕರದ್ದು.

(ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net