ಬ್ಯಾಂಕ್​ಗೆ ನುಗ್ಗಿ 15 ನಿಮಿಷದಲ್ಲಿ 12 ಕೋಟಿ ರೂಪಾಯಿ ದರೋಡೆ!

6-678a9c220dc44
Published on

ಬೀದರ್ ಘಟನೆ ಬೆನ್ನಲ್ಲೇ ಉಳ್ಳಾಲದಲ್ಲಿ ಲೂಟಿಗ್ಯಾಂಗ್ ಕೃತ್ಯ

ಉಳ್ಳಾಲ(ದ.ಕ.): ಬೀದರ್​ನಲ್ಲಿ ಸಿಎಂಎಸ್ ಏಜೆನ್ಸಿ ಸಿಬ್ಬಂದಿಗೆ ಗುಂಡು ಹಾರಿಸಿ ಎಟಿಎಂಗೆ ಹಾಕಲು ಕೊಂಡೊಯುತ್ತಿದ್ದ ಹಣವನ್ನು ದುಷ್ಕರ್ವಿುಗಳು ಹೊತ್ತೊಯ್ದ ಘಟನೆ ನಡೆದ 24 ಗಂಟೆ ಅವಧಿಯಲ್ಲಿ ಅದೇ ಮಾದರಿ ದರೋಡೆಗೆ ಕರಾವಳಿ ಬೆಚ್ಚಿದೆ.

ತಲಪಾಡಿ ಸಮೀಪದ ಕೆ.ಸಿ.ರೋಡ್ ಜಂಕ್ಷನ್​ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ಗೆ ಶುಕ್ರವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರ ತಂಡ ಪಿಸ್ತೂಲು, ತಲವಾರು, ಚಾಕು ತೋರಿಸಿ 15 ನಿಮಿಷದಲ್ಲಿ 10ರಿಂದ 12 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 11 ಲಕ್ಷ ರೂ.ಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕೇರಳ ಕಡೆಗೆ ಕಾರಿನಲ್ಲಿ ಪರಾರಿಯಾಗಿದೆ.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ನ ಪ್ರಧಾನ ಕಚೇರಿ ಕೋಟೆಕಾರ್ ಬೀದಿಯಲ್ಲಿದ್ದು, ವಿವಿಧ ಕಡೆ ಶಾಖೆಗಳನ್ನು ಹೊಂದಿದೆ. ಆ ಪೈಕಿ ಕೆ.ಸಿ.ರೋಡ್ ಜಂಕ್ಷನ್​ನಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿರುವ ಶಾಖೆ ಸೇರಿದೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಐವರು ಯುವಕರ ತಂಡ ಏಕಾಏಕಿ ಬ್ಯಾಂಕ್​ಗೆ ನುಗ್ಗಿದೆ. ಬ್ಯಾಂಕ್​ನಲ್ಲಿ ಮೂವರು ಮಹಿಳೆಯರು, ಓರ್ವ ಪುರುಷ ಸಿಬ್ಬಂದಿ ಹಾಗೂ ಟೆಕ್ನೀಷಿಯನ್ ಇದ್ದರು. ಈ ಸಂದರ್ಭ ಸಿಬ್ಬಂದಿ ಬೊಬ್ಬೆ ಹಾಕಿದ್ದಾರೆ. ಬ್ಯಾಂಕ್​ನ ಕೆಳ ಅಂತಸ್ತಿನ ಬೇಕರಿಗೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಿಬ್ಬಂದಿಯ ಬೊಬ್ಬೆ ಕೇಳಿ ಬ್ಯಾಂಕ್​ಗೆ ಓಡಿ ಬಂದಿದ್ದಾರೆ. ಈ ಸಂದರ್ಭ ದರೋಡೆಕೋರರು ವಿದ್ಯಾರ್ಥಿಗಳಿಗೆ ಪಿಸ್ತೂಲ್ ಪ್ರದರ್ಶಿಸಿ ಬೆದರಿಸಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಒಂದು ಕಪಾಟು ತೆರೆಯದ ಕಾರಣ ಒಂದಷ್ಟು ನಗದು ಮತ್ತು ಚಿನ್ನಾಭರಣವನ್ನು ಬಿಟ್ಟು ಹೋಗಿದ್ದಾರೆ.

ಬ್ಯಾಂಕ್ ದರೋಡೆ ಹೇಗಾಯ್ತು?

1. ಮಧ್ಯಾಹ್ನ 1 ಗಂಟೆಗೆ ಏಕಾಏಕಿ ದುಷ್ಕರ್ವಿುಗಳ ದಾಳಿ

2. ಬ್ಯಾಂಕ್ ಒಳಗೆ ನುಗ್ಗಿದ ಐವರು ಯುವಕರ ತಂಡ

3.ಕಳ್ಳರ ನೋಡಿ ಹೆದರಿ ಕಿರುಚಿದ ಬ್ಯಾಂಕ್ ಸಿಬ್ಬಂದಿ

4.ಸದ್ದು ಕೇಳಿ ಬ್ಯಾಂಕ್​ಗೆ ಓಡಿಬಂದ ವಿದ್ಯಾರ್ಥಿಗಳು

5.ಪಿಸ್ತೂಲ್ ತೋರಿಸಿ ಎಲ್ಲರನ್ನೂ ಹೆದರಿಸಿದ ಕಳ್ಳರು

6.ಕಪಾಟಿನಲ್ಲಿದ್ದ ನಗದು, ಆಭರಣ ಹೊತ್ತು ಪರಾರಿ

ಸ್ಥಳೀಯರ ಕೃತ್ಯ ಶಂಕೆ

ಬ್ಯಾಂಕ್ ಇರುವ ಸ್ಥಳದಲ್ಲಿ ಮುಸ್ಲಿಂ ವರ್ತಕರು ಹೆಚ್ಚಿದ್ದಾರೆ. ಶುಕ್ರವಾರವಾದ್ದರಿಂದ ಬಹುತೇಕರು ನಮಾಜ್​ಗೆ ಹೋಗಿದ್ದರು. ಇದೇ ಸಮಯದಲ್ಲಿ ಕಳ್ಳರ ತಂಡ ದಾಳಿ ನಡೆಸಿರುವುದರಿಂದ ದರೋಡೆ ಹಿಂದೆ ಸ್ಥಳೀಯರ ಕೈವಾಡವಿರಬಹುದೆಂದು ಶಂಕಿಸಲಾಗಿದೆ.

ಟೆಕ್ನೀಷಿಯನ್ ಉಂಗುರ ಕಸಿದರು

ಬ್ಯಾಂಕ್​ನ ಒಳ ಮತ್ತು ಹೊರಭಾಗದಲ್ಲಿ ಸಿಸಿ ಕ್ಯಾಮರಾ ಇದೆ. ಆದರೆ ಶುಕ್ರವಾರ ಹಾಳಾಗಿದ್ದರಿಂದ ಸರ್ವೀಸ್ ಮಾಡುವ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲೇ ಕೖತ್ಯ ನಡೆದಿದ್ದು, ಒಳಭಾಗದ ಯಾವುದೇ ದೃಶ್ಯಗಳು ಸೆರೆಯಾಗಿಲ್ಲ. ಆದರೆ ಆರೋಪಿಗಳು ಪರಾರಿಯಾಗುತ್ತಿರುವ ದೃಶ್ಯ ಹೊರಗಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದರೋಡೆಕೋರರು ಸಿಸಿ ಕ್ಯಾಮರಾ ಸರ್ವೀಸ್​ಗೆ ಬಂದಿದ್ದ ಟೆಕ್ನೀಷಿಯನ್​ನ ಉಂಗುರವನ್ನೂ ಕಸಿದು ಕಪ್ಪು ಬಣ್ಣದ ಫಿಯೆಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸಮಯದಲ್ಲೇ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸ್ಪೀಕರ್ ಯು.ಟಿ.ಖಾದರ್ ಬ್ಯಾಂಕ್​ಗೆ ಭೇಟಿ ನೀಡಿ ಆರೋಪಿಗಳನ್ನು ಶೀಘ್ರ ಬಂಧಿಸುವುದಕ್ಕೆ ವಿಶೇಷ ತಂಡ ರಚಿಸಲು ಪೊಲೀಸರಿಗೆ ಸೂಚನೆ ನೀಡಿದರು.

ಸಿಎಂ ತರಾಟೆ

ಸಿಎಂ ಮಂಗಳೂರು ಭೇಟಿ ಸಂದರ್ಭದಲ್ಲೇ ಈ ದುಷ್ಕೃತ್ಯ ನಡೆದಿದೆ. ಸರ್ಕ್ಯುಟ್ ಹೌಸ್​ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಮಾಲೋಚಿಸಿದ ಸಿದ್ದರಾಮಯ್ಯ, ‘ನೀವೆಲ್ಲಾ ಇದ್ದು ಏಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ’ ಎಂದು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net