

ಕಾರವಾರ: 'ಈ ರಸ್ತೆಯ ಜಾಗ ಮಾರಾಟಕ್ಕಿದೆ...' ಹೌದು ಇಂತಹದ್ದೊಂದು ಫಲಕ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಗುಂಡಬಾಳ ಬಳಿ ಹಾಕಲಾಗಿದ್ದು, ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆಯಲ್ಲಿ ಅಳವಡಿಸಿರುವ ಫಲಕದಲ್ಲಿ 'ಜಾಗ ಮಾರಾಟಕ್ಕಿದೆ... ವ್ಯವಸ್ಥಾಪಕರು ಮತ್ತು ಶಾಸಕರು ಶಿರಸಿ ಮತ್ತು ಸಿದ್ದಾಪುರ ವಿಧಾನಸಭಾ ಕ್ಷೇತ್ರ' ಎಂಬ ಬರಹ ಇದೆ. ಅಂದಹಾಗೆ ರಸ್ತೆಯೋ, ರಸ್ತೆ ಪಕ್ಕದ ಜಾಗವೋ ಮಾರಾಟಕ್ಕಿದೆ. ಅದನ್ನು ಖರೀದಿಸಿಯೇ ಬಿಡೋಣ ಅಂದುಕೊಳ್ಳುವ ಮುನ್ನ ಜೋಕೆ! ಯಾಕೆಂದರೆ ಈ ಫಲಕ ಹಾಕಿರೋದು ಸ್ಥಳೀಯ.
ಗುಂಡಬಾಳ ಬಳಿ ವರ್ಷದ ಹಿಂದೆ ಧರೆ ಕುಸಿದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕುಸಿದ ಭಾಗದಲ್ಲಿ ಒಂದು ಕಾಂಪೌಂಡ್ ಕಟ್ಟಿಬಿಟ್ಟಿದೆ. ಯಾವುದೇ ಶಾಶ್ವತ ಕಾಮಗಾರಿ ನಡೆಸಿಲ್ಲ. ಹಾಳಾದ ರಸ್ತೆ ರಿಪೇರಿ ಮಾಡಿಲ್ಲ ಎಂಬ ಕಾರಣಕ್ಕೆ ಅದೇ ಜಾಗ ಮಾರಾಟಕ್ಕಿದೆ ಎಂದು ಸ್ಥಳೀಯ ರಾಜೇಶ ಶೇಟ್ ಎಂಬಾತ ಫಲಕ ಅಳವಡಿಸಿ ಜಾಲತಾಣಗಳಲ್ಲಿ ಹರಿಬಿಟ್ಟು ವಿಭಿನ್ನ ಪ್ರತಿಭಟನೆ ನಡೆಸಿದ್ದಾನೆ.
ಅಲ್ಲದೆ, ಅಲ್ಲಿನ ಪರಿಸ್ಥಿತಿಯನ್ನು ಫೋಟೋ ಹಾಗೂ ವಿವರಗಳನ್ನು ಫೇಸ್ಬುಕ್ನಲ್ಲಿ ಬರೆದಿದ್ದು, ಫೋಟೋ ಸಾಕಷ್ಟು ವೈರಲ್ ಆಗಿದೆ. ಶಿರಸಿ ಮತ್ತು ಕುಮಟಾ ದೇವಿಮನೆ ಘಟ್ಟ ಬಂದಾದರೆ ಕರಾವಳಿಯಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ 206 ಪ್ರಮುಖವಾಗಲಿದೆ. ಆದರೆ, ಒಂದೂವರೆ ವರ್ಷ ಕಳೆದರೂ ಶಾಶ್ವತ ಕಾಮಗಾರಿ ಕೈಗೊಳ್ಳದೆ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.