ಜಾಡಮಾಲಿಗಳ ಸಾವು ಪ್ರಕರಣದ ತನಿಖೆ ನಡೆಸಿ: ಪೌರಕಾರ್ಮಿಕರ ಸಂಘದ ಅಧ್ಯಕ್ಷ ಟಿ.ಸಿ.ಉಮಾಶಂಕರ್ ಒತ್ತಾಯ

13 -MGD P1
Published on

ಮಾಗಡಿ : ರಾಮನಗರದಲ್ಲಿ ಮ್ಯಾನ್‌ಹೋಲ್‌ನಲ್ಲಿ ಮೂವರು ಜಾಡಮಾಲಿಗಳ ಸಾವು ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳಿಗೆ ನೇರ ನೇಮಕಾತಿ, ನಗರ ಸ್ಥಳಿಯ ಸಂಸ್ಥೆ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪದ್ಧತಿ ಜಾರಿಗೊಳಿಸುವಂತೆ ಪೌರಕಾರ್ಮಿಕರು ಪುರಸಭೆ ಕಚೇರಿ ಮುಂದೆ ಭಾನುವಾರ ಮೌನ ಪ್ರತಿಭಟನೆ ನಡೆಸಿದರು.

ರಾಮನಗರದಲ್ಲಿ ಜೂ.4 ರಂದು ಮ್ಯಾನ್‌ಹೋಲ್ ಕಾಮಗಾರಿ ನಿರ್ವಹಿಸುತ್ತಿದ್ದ ವೇಳೆ ಮೂರು ಪೌರಕಾರ್ಮಿಕರು ಸಾವನ್ನಪಿದ್ದು, ಇದೇ ರೀತಿ ರಾಜ್ಯದಲ್ಲಿ ಕಳೆದ 10 ವರ್ಷದಿಂದ ಸುಮಾರು 80 ಪ್ರಕರಣಗಳು ನಡೆದರೂ ಆಡಳಿತ ವರ್ಗ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಬೇಜವಬ್ದಾರಿತನ ತೋರಿಸಿದೆ. ಘಟನೆ ನಡೆದಾಗ ಒಂದಿಷ್ಟು ಪರಿಹಾರ ನೀಡಿ ಕೈತೋಳೆದುಕೊಳ್ಳಲಾಗುತ್ತಿದೆ ಎಂದು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಟಿ.ಸಿ.ಉಮಾಶಂಕರ್ ಆರೋಪಿಸಿದರು.

ಮದ್ದೂರಿನಲ್ಲಿ ಅಧಿಕಾರಿಗಳ ಬಲವಂತದಿಂದ ಮ್ಯಾನ್‌ಹೋಲ್‌ಗೆ ಇಳಿದ ಪೌರಕಾರ್ಮಿಕ ನಾರಾಯಣ್, ಪುರಸಭಾ ಮುಖ್ಯಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಕರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡರು. ಈ ಪ್ರಕರಣದಲ್ಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವ ಮುನ್ನವೇ ಅಧಿಕಾರಿಗಳ ಅಮಾನತು ತೆರವುಗೊಳಿಸಿ ಪ್ರಕರಣ ಮುಚ್ಚಿಹಾಕಲು ಸಾಕ್ಷಿಗಳನ್ನು ಬೆದರಿಸಿ ಪ್ರಕರಣ ಮುಚ್ಚಿಹಾಕಲು ಪೊಲೀಸರು ಸಂಚು ನಡೆಸಿದ್ದಾರೆ. ಇಷ್ಟೆಲ್ಲಾ ಘಟನೆಗಳು ನಡೆದರೂ ಪೌರಕಾರ್ಮಿಕರ ಜೀವನಕ್ಕೆ ಬೆಲೆ ಇಲ್ಲ ಎಂಬುದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮ್ಯಾನ್‌ಹೋಲ್‌ನಲ್ಲಿ ಬಿದ್ದು ಪ್ರಾಣಕಳೆದುಕೊಂಡ ಕುಟುಂಬಗಳಿಗೆ ಅವರು ಬಯಸಿದ ಸ್ಥಳದಲ್ಲಿ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕು. ರಾಜ್ಯದಲ್ಲಿ ಅತ್ಯಂತ ಅಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬಾಕಿ ಉಳಿದಿರುವ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಚಾಲನೆ ನೀಡಬೇಕು ಎಂದು ಉಪಾಧ್ಯಕ್ಷ ದೊಡ್ಡಯ್ಯ ಒತ್ತಾಯಿಸಿದರು.

ಕಾರ್ಯದರ್ಶಿ ಬಿ.ಎನ್. ಚಿಕ್ಕನರಸಯ್ಯ, ಖಜಾಂಚಿ ಶ್ರೀನಿವಾಸ್,ರೇವಣ್ಣ, ನಟರಾಜ, ಗೋವಿಂದ, ರಮೇಶ್, ಎಲ್.ಜಿ.ಶ್ರೀನಿವಾಸ್, ಮಹಾಲಿಂಗಯ್ಯ, ರವಿಕುಮಾರ್,ನಾಗವೇಣಿ, ಗೀತಾ, ಸುರೇಶ್, ಮೀಸೆ ನಾಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net